ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೋರೋನಾ ಸೊಂಕಿನಿಂದ ಸಂಪೂರ್ಣ ಗುಣಮುಖರಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೂಲದ ಆರು ತಿಂಗಳ ಗರ್ಭಿಣಿ ಮಹಿಳೆಯನ್ನು ಉಡುಪಿ ಜಿಲ್ಲಾಡಳಿತ ಮಡಿಲು ತುಂಬಿ ಬೀಳ್ಕೊಟ್ಟು ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.
ಭಟ್ಕಳಕ್ಕೆ ಹೊರಟು ನಿಂತಿದ್ದ ಗರ್ಭಿಣಿಗೆ ಜಿಲ್ಲಾಡಳಿತದ ಪರವಾಗಿ ಉಡುಪಿ ಸಿಇಓ ಪ್ರೀತಿ ಗೆಹ್ಲೋಟ್ ಅವರು ಮಲ್ಲಿಗೆ ಹೂವು, ಸಿಹಿ ತಿಂಡಿ, ಹಣ್ಣುಗಳಿದ್ದ ತಟ್ಟೆಯನ್ನು ನೀಡಿ ಬೀಳ್ಕೊಟ್ಟರು. ಈ ಸಂದರ್ಭ ಜಿಲ್ಲಾಧಿಕಾರಿ ಜಿ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಡಿಹೆಚ್‌ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರೇಮಾನಂದ್ , ಕೆಎಂಸಿ ಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಡಾ. ಶಶಿ ಕಿರಣ್ ಹಾಗೂ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಎ.9ರಂದು ಭಟ್ಕಳ ಮೂಲದ 26 ವರ್ಷದ ಗರ್ಭಿಣಿ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಾನವೀಯ ನೆಲೆಯಲ್ಲಿ ಉಡುಪಿ ಜಿಲ್ಲೆಯ ಡಾ| ಟಿ.ಎಂ.ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಏಪ್ರಿಲ್ 21 ರಂದು ಆಕೆಯ ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಏಪ್ರಿಲ್ 23 ರಂದು ಎರಡನೇ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಮಹಿಳೆ ಗುಣಮುಖರಾಗಿರುವುದು ವರದಿಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಇದು ಉಡುಪಿ ಜಿಲ್ಲೆ ಹೆಮ್ಮೆ ಪಡುವ ದಿನವಾಗಿದೆ. ಆರು ತಿಂಗಳ ಗರ್ಭಿಣಿಗೆ ಕೊರೋನಾ ಸೊಂಕು ತಗಲಿದ್ದರಿಂದ ಮಹಿಳೆಯ ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಉಡುಪಿಯ ಕೋವಿಡ್ ಆಸ್ಪತ್ರೆ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದರೂ, ಸಿಎಂ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯಿಂದ ಚಿಕಿತ್ಸೆಗಾಗಿ ಮಹಿಳೆಯನ್ನು ಉಡುಪಿ ಜಿಲ್ಲೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಇಂದು ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಮಹಿಳೆ ಹಾಗೂ ಮಗುವನ್ನು ಉಳಿಸಿದ ಖುಷಿಯಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ವೈದ್ಯರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊರೋನಾದಿಂದ ಗುಣಮುಖರಾದ ಮಹಿಳೆ ಪ್ರತಿಕ್ರಿಯಿಸಿ ಆಸ್ಪತ್ರೆಯ ವೈದ್ಯರುಗಳು ಮನೆಯವರಂತೆ ನೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂಧಿಗಳು ಹಾಗೂ ಆಸ್ಪತ್ರೆಯವರಿಗೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ. ದೇವರ ಇಚ್ಛೆ ಇದ್ದರೆ ಇಲ್ಲಿಯೇ ಹೆರಿಗೆಗೆ ಬರುತ್ತೇನೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜಿಲ್ಲೆಯಲ್ಲಿ ಈ ಮೊದಲು ಕೊರೋನಾ ಸೋಂಕು ತಗುಲಿದ್ದ ಮೂವರು ಗುಣಮುಖರಾಗಿ ಡಿಸ್‌ಚಾರ್ಜ್ ಆಗಿದ್ದು, ಇದೀಗ ಉಡುಪಿ ಜಿಲ್ಲೆ ಕೋರೋಣ ಮುಕ್ತ ಜಿಲ್ಲೆಯಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಉಡುಪಿ ಸದ್ಯಕ್ಕೆ ಕೊರೋನಾ ಮುಕ್ತ ಜಿಲ್ಲೆ – https://kundapraa.com/?p=36996 .
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸುದ್ದಿ- ಮಾಹಿತಿಯ ಅಂತರ್ಜಾಲ ತಾಣ ಕುಂದಾಪ್ರ ಡಾಟ್ ಕಾಂ
ಕೈಗೆಟಕುವ ದರದಲ್ಲಿ ವೆಬ್ಸೈಟ್ ಡಿಸೈನ್, ಗ್ರಾಫಿಕ್ ಡಿಸೈನ್, ಬಲ್ಕ್ ಎಸ್‌ಎಂಎಸ್ ಹಾಗೂ ಇನ್ನಿತರ ಆನ್‌ಲೈನ್ ಪ್ರಚಾರ ಸೇವೆಗಳಿಗಾಗಿ ಸಂಪರ್ಕಿಸಿ ಸಮಷ್ಟಿ ಮೀಡಿಯಾ ವೆಂಚರ‍್ಸ್ – 9743877358