ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಿಕ್ಷಾ ಚಾಲಕರಿಗೆ ಪೊಲೀಸರಷ್ಟೇ ಜವಾಬ್ದಾರಿ ಇದೆ. ಅವರೂ ನಮ್ಮಂತೆಯೇ ಖಾಕಿ ಧರಿಸುತ್ತಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅವರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹೇಳಿದರು.
ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟವ್ ವತಿಯಿಂದ ಶುಕ್ರವಾರ ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ಭಾಗದ ಪ್ಯಾಸೆಂಜರ್ ಆಟೋ ಚಾಲಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳುವ ಆಟೋ ಚಾಲಕರಿಗೆ ಕಠಿಣ ಸಂದರ್ಭದಲ್ಲಿ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಲಾಕ್‌ಡೌನ್‌ನಿಂದಾಗಿ ರಿಕ್ಷಾ ಚಾಲಕರು ಕಳೆದೊಂದು ತಿಂಗಳಿನಿಂದ ಮನೆಯಲ್ಲಿರುವಂತಾಗಿದೆ. ದಿನದ ದುಡಿಮೆಯನ್ನು ಅವಲಂಬಿಸಿ ಬದುಕುವ ಅವರಿಗೆ ನಮ್ಮ ಸಂಸ್ಥೆಯಿಂದ ಸ್ಪಲ್ವ ಮಟ್ಟಿಗೆ ನೆರವಾಗುತ್ತಿರುವ ತೃಪ್ತಿ ಇದೆ. ಈಗಾಗಲೇ ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೂ ಸಂಸ್ಥೆಯಿಂದ ನೆರವು ನೀಡಲಾಗಿದೆ ಎಂದರು.
ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತಾ, ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕ ರಾಮಕೃಷ್ಣ ಖಾರ್ವಿ, ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಕಾರ್ಯನಿರ್ವಹಣಾಧಿಕಾರಿ ಸೀತರಾಮ ಮಡಿವಾಳ ಇದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ಭಾಗದ ಎಲ್ಲಾ ಆಟೋ ಸ್ಟ್ಯಾಂಡ್‌ಗಳ ಚಾಲಕರಿಗೆ ಕಿಟ್ ವಿತರಿಸಲಾಯಿತು.



















