ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯಾದ್ಯಂತ ಇಂದಿನಿಂದ ಮದ್ಯದಂಗಡಿಗಳ ಬಾಗಿಲು ತೆರೆದಿದ್ದು, ಮಧ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಖರೀದಿಯಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆಯೂ ಕಂಡುಬರುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಲ್ಲಾ ಬಾರ್‌ಗಳ ಮುಂದೆಯೂ ಜನಸಂದಣಿ ಸಾಮಾನ್ಯವಾಗಿದ್ದು, ಮದ್ಯಪ್ರಿಯರ ನೂಕುನುಗ್ಗಲಿನಿಂದಾಗಿ ಬೈಂದೂರು ಪೇಟೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆದ ಘಟನೆಯೂ ನಡೆದಿದೆ. ಇಂತಹ ಸಂದರ್ಭದಲ್ಲಿ ಬಾರ್‌ಗಳನ್ನು ಮತ್ತೆ ತೆರೆದಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 1ರ ತನಕ ಮಾರಾಟ:
ಲಾಕ್‌ಡೌನ್ ಜಾರಿಯಾದಾಗಲಿಂದ ಮುಚ್ಚಿದ್ದ ಮದ್ಯದಂಗಡಿಗಳು, ಇಂದಿನಿಂದ ತೆರೆದಿರುವುದರಿಂದ ಮದ್ಯಪ್ರಿಯರ ಚಡಪಡಿಕೆ ಹೆಚ್ಚಿದ್ದವು. ಎಲ್ಲಾ ಬಾರ್‌ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ಕೆಲವು ಬಾರ್‌ಗಳ ಮುಂದೆ ಹತ್ತಾರು ಮೀಟರ್‌ಗಳಷ್ಟು ದೂರಕ್ಕೆ ಮದ್ಯಪ್ರಿಯರ ಸರತಿ ಸಾಲು ಸಾಗಿತ್ತು. ಕೆಲವೆಡೆ ಗುಂಪುಗುಂಪಾಗಿ ನಿಂತು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿರುವುದು ಕಂಡುಬಂತು. ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಎಲ್ಲಾ ಅಂಗಡಿ ಬಾಗಿಲು ಹಾಕಬೇಕಿರುವುದರಿಂದ ಬಾರ್‌ಗಳು 1 ಗಂಟೆಯ ಬಳಿಕ ಕ್ಲೋಸ್ ಆಗಲಿದ್ದು, ಆ ಬಳಿಕ ಬಂದವರಿಗೆ ಟೋಕನ್ ನೀಡಲಾಗುತ್ತದೆ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಲಾಕ್‌ಡೌನ್ ನಡುವೆ ಕದ್ದುಮುಚ್ಚಿ ನಡೆದಿದ್ದ ವ್ಯವಹಾರ:
ಲಾಕ್‌ಡೌನ್ ಇದ್ದರೂ ಕದ್ದುಮುಚ್ಚಿ ಮದ್ಯಮಾರಾಟ ನಡೆಯುತ್ತಲೇ ಇದ್ದವು. ಈ ನಡವೆ ಕಳಪೆ ಮದ್ಯವೂ ಮಾರಾಟವಾಗಿದೆ ಎಂಬ ಆರೋಪಗಳೂ ಇವೆ. ಎಂಆರ್‌ಪಿ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ನಡೆದಿದ್ದು ಗುಟ್ಟಾಗಿ ಉಳಿದಿಲ್ಲ. ಅಲ್ಲಲ್ಲಿ ನೆಪಮಾತ್ರಕ್ಕೆ ರೈಡ್‌ಗಳು ನಡೆದಿದ್ದವು. ಇದೀಗ ಬಾರ್‌ಗಳಲ್ಲಿಯೇ ನೇರವಾಗಿ ಎಂಆರ್‌ಪಿ ಬೆಲೆಗೆ ದೊರೆಯುತ್ತಿರುವುದರಿಂದ ಜನ ಅಲ್ಲಿ ಮುಗಿಬಿದ್ದಿದ್ದಾರೆ. ಈ ನಡುವೆ ಕೆಲವು ಬಾರ್‌ಗಳಲ್ಲಿನ ಸ್ಟಾಕ್ ಖಾಲಿಯಾಗುವ ಸಾಧ್ಯತೆಯೂ ಇದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹಿತವಚನಕ್ಕಿಲ್ಲ ಕಿಮ್ಮತ್ತು:
ಇನ್ನು ಲಾಕ್‌ಡೌನ್ ಆದಾಗಿನಿಂದ ಮದ್ಯ ಸೇವಿಸದೇ ಹೊಂದಿಕೊಂಡಿದ್ದ ಮದ್ಯವ್ಯಸನಿಗಳಿಗೆ ಮದ್ಯ ತ್ಯಜಿಸುವಂತೆ ಹಲವರು ಸಲಹೆ ನೀಡಿದ್ದರು. ಮದ್ಯ ತ್ಯಜಿಸಲು ಇದು ಸಕಾಲ. ಕುಡಿತಕ್ಕೆ ಮತ್ತೆ ಬಲಿಯಾಗಿ ಕುಟುಂಬವನ್ನು ಕಷ್ಟಕ್ಕೆ ನೂಕದಿರಿ, ದೇಹಸ್ಥಿತಿಯನ್ನು ಮತ್ತೆ ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ ಮದ್ಯವ್ಯಸನಿಗಳು ಮಾತ್ರ ಬಾರ್ ಬಾಗಿಲು ತೆರೆಯುವ ಮುಂಚೆಯೂ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಕೊರೋನಾ ಮಹಾಮಾರಿಯನ್ನು ಎದುರಿಸುತ್ತಿರುವ ಇಂತಹ ಕಠಿಣ ಸಂದರ್ಭದಲ್ಲಿ ಸರಕಾರಗಳು ಮದ್ಯದಂಗಡಿ ತೆರೆದು ಜನರನ್ನು ಮತ್ತಷ್ಟು ಆರ್ಥಿಕ, ಕೌಟುಂಬಿಕ ಸಂಕಷ್ಟಕ್ಕೆ ನೂಕುತ್ತಿದೆ ಎಂದು ಪ್ರಜ್ಞಾವಂತರು ದೂರಿಕೊಳ್ಳುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/