ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು, ಮೇ.7: ವಾರದ ಹಿಂದೆ ಬೈಂದೂರು ಭಾಗದ ನಾಗರಿಕರಲ್ಲಿ ಭಾರಿ ಆತಂಕ ಸೃಷ್ಟಿಸಿದ್ದ ‘ಕೋರೋನಾ ಪಾಸಿಟಿವ್’ ಎಂಬ ಸುಳ್ಳುಸುದ್ದಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಿದೆ. ಮೇ.1ರ ರಾತ್ರಿ ಬೈಂದೂರು ತಾಲೂಕಿನ ಕಳವಾಡಿಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ಬೆಳಗಾವಿಯಲ್ಲಿ ಮಾಡಲಾಗಿದ್ದ ಕೋರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿರುವುದು ಮೇ.2ರಂದು ಖಚಿತವಾಗಿತ್ತು. ಅಷ್ಟರಲ್ಲಾಗಲೇ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವ ವದಂತಿ ಹರಿದಾಡಿದ್ದರಿಂದ ಉಡುಪಿಯಿಂದಲೂ ಪರೀಕ್ಷೆಗೆ ಕಳುಹಿಸಲಾಗಿದ್ದ ಕೋರೋನಾ ಟೆಸ್ಟ್ ವರದಿ ನಿನ್ನೆ ದೊರಕಿದ್ದು, ಅದರಲ್ಲಿಯೂ ಆತನಿಗೆಕೊರೋನಾ ನೆಗೆಟಿವ್ ಇರುವುದು ಖಾತ್ರಿಯಾಗಿದೆ.
ಬೆಳಗಾವಿಯ ಕಾನಾಪುರದಿಂದ ಬೈಂದೂರು ಕಳವಾಡಿಯ ಬಂದಿದ್ದ ವ್ಯಕ್ತಿಯೋರ್ವರಿಗೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಕೋರೋನಾ ಟೆಸ್ಟಿಂಗ್ ವರದಿ ಅಪ್‌ಡೇಟ್ ಮಾಡುವ ಸಂದರ್ಭ ಆಗಿದ್ದ ಯಡವಟ್ಟಿನಿಂದಾಗಿ ಆರೋಗ್ಯ ಸೇತು ಆ್ಯಪ್ ಕೊರೋನಾ ಪಾಸಿಟಿವ್ ಇದೆ ಎಂದು ತೋರಿಸಿತ್ತು ಎನ್ನಲಾಗಿದೆ. ಅದರ ಆಧಾರದ ಮೇಲೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಕುಂದಾಪುರದ ಐಸೋಲೇಶನ್ ವಾರ್ಡ್ ಕರೆದೊಯ್ದು ಆತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಬಳಿಕ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ಆ ವ್ಯಕ್ತಿಗೆ ಬೆಳಗಾವಿಯಲ್ಲಿ ಮಾಡಲಾಗಿದ್ದ ಕೊರೋನಾ ಟೆಸ್ಟ್‌ನಲ್ಲಿ ನೆಗಿಟಿವ್ ಬಂದಿರುವುದು ಖಚಿತವಾಗಿತ್ತು. ಅಷ್ಟರಲ್ಲಾಗಲೇ ಕೆಲವರು ಬೈಂದೂರಿನ ಕಳವಾಡಿಗೆ ಬಂದಿದ್ದ ವ್ಯಕ್ತಿಗೆ ಕೋರೋನಾ ಸೋಂಕು ಇದೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ಮೀನು ಚರಂಡಿಗೆ, ಅಂಗಡಿಗಳು ಬಂದ್ ಆಗಿದ್ದವು!
ಸುಳ್ಳುಸುದ್ದಿಯ ಕಾರಣದಿಂದ ಆತನ ಮನೆಗೆ ತೆರಳುವ ಮಾರ್ಗದ ಅಂಗಡಿಗಳು ಬಂದ್ ಆಗಿ ಕೆಲಗಂಟೆಗಳ ಕಾಲ ಜನರು ಮನೆಯಿಂದಲೇ ಹೊರ ಬರಲು ಅಂಜಿದ್ದರು. ಆತನ ಮನೆಗೆ ಸಮೀಪ ಮೀನು ಮಾರಾಟಕ್ಕೆ ಬಂದಿದ್ದ ವ್ಯಕ್ತಿಯಿಂದ ಮೀನು ಖರೀದಿಸಿ, ಸುಳ್ಳುಸುದ್ದಿ ಹರಿದಾಡುತ್ತಿದ್ದಂತೆ ಮೀನುಗಳನ್ನು ಹೊರಗೆಸೆದ ಘಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಅಂತೆ ಕಂತೆಯೇ ಫಾರ್ವ್‌ರ್ಡ್ ಆಗಿರುವುದು ನೋಡಿ, ಹೌದಾ-ಹೌದಂತೆ ಎಂದು ಕುಟುಂಬಿಕರು, ಸ್ನೇಹಿತರಿಗೆ ನೂರಾರು ಪೋನ್ ಕರೆಗಳು ವಿನಿಮಯವಾಗಿದ್ದವು. ಬೈಂದೂರು ಭಾಗದ ಯಾವೆಲ್ಲಾ ಏರಿಯಾ ಸೀಲ್‌ಡೌನ್ ಆಗಲಿದೆ ಎಂದು ಕೇಳುತ್ತಿದ್ದರು. ಸ್ವತಃ ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ವಿಚಲಿತರಾಗಿದ್ದರು, ಪೊಲೀಸರು ಪೇಟೆಯ ಅಂಗಡಿಗಳನ್ನು ಮುಚ್ಚಿಸಿ ಜನರ ಆತಂಕ ಹೆಚ್ಚುವಂತೆ ಮಾಡಿದ್ದರು. ಕೆಲ ಗಂಟೆಗಳಲ್ಲಿ ಬೆಳಗಾವಿಯ ಕೊರೋನಾ ಟೆಸ್ಟ್ ನೆಗಿಟಿವ್ ಇರುವ ವರದಿ ಕೈಸೆರುತ್ತಿದ್ದಂತೆ ಜನರು ನಿರಾಳರಾದರು.
ಸುಳ್ಳುಸುದ್ದಿ ಹರಡಬೇಡಿ:
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುಳ್ಳುಸುದ್ದಿಗಳನ್ನು ಹರಡುವುದು, ಕೋರನಾ ಶಂಕಿತ ಅಥವಾ ಸೋಂಕಿತ ವ್ಯಕಿಯ ಭಾವಚಿತ್ರ ಮತ್ತು ಆತನ ಮಾಹಿತಿಯನ್ನು ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಕೋವಿಡ್-೧೯ಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಅಧಿಕೃತ ಮಾಹಿತಿಯನ್ನು ತಿಳಿಸಲು ಅಧಿಕಾರವಿದ್ದು, ಮತ್ಯಾರಿಗೂ ಆ ಬಗ್ಗೆ ಮಾಹಿತಿ ನೀಡಲು ಕೂಡ ಅಧಿಕಾರವಿಲ್ಲ. ಕೋವಿಡ್-೧೯ ಬಗೆಗಿನ ಸಂಪೂರ್ಣ ಮಾಹಿತಿಯ ಬಗ್ಗೆ ರಾಜ್ಯ ಸರಕಾರ ಬೆಳಿಗ್ಗೆ ಹಾಗೂ ಸಂಜೆ ಬುಲೆಟಿನ್ ಬಿಡುಗಡೆ ಮಡುತ್ತದೆ. ಮಾಧ್ಯಮಗಳು ಜಿಲ್ಲಾಧಿಕಾರಿಗಳ ಹೇಳಿಕೆ ಹಾಗೂ ಸರಕಾರದ ಪತ್ರಿಕಾ ಪ್ರಕಟಣೆಯ ಆಧಾರದ ಮೇಲೆಯೇ ವರದಿ ಪ್ರಕಟಿಸುತ್ತವೆ. ಕುಂದಾಪ್ರ ಡಾಟ್ ಕಾಂ ವರದಿ.
ಸುದ್ದಿಮೂಲವನ್ನು ಅರಿಯದೇ ಸಂದೇಶಗಳನ್ನು ಪ್ರಕಟಿಸುವುದು ಮತ್ತು ಫಾರ್ವ್‌ರ್ಡ್ ಮಾಡುವುದರಿಂದ ಸೋಶಿಯಲ್ ಮೀಡಿಯಾ, ಮೆಸೆಜಿಂಗ್ ಆಪ್‌ನ ಗ್ರೂಪ್‌ಗಳ ಅಡ್ಮಿನ್ ಹಾಗೂ ಸಂದೇಶ ಕಳುಹಿಸಿದನು ಸಂಕಷ್ಟಕ್ಕೆ ಸಿಲುಕಿದ ಹಲವಾರು ಪ್ರಕರಣಗಳಿವೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ/ಕುಂದಾಪ್ರ ಡಾಟ್ ಕಾಂ ವರದಿ/
ಇದನ್ನೂ ಓದಿ:
► ಭಯ ಬೇಡ: ಬೈಂದೂರಿನಲ್ಲಿ ಕೋರೋನಾ ಗಾಸಿಪ್. ಬೆಳಗಾವಿಯಿಂದ ಬಂದ ವ್ಯಕ್ತಿಗೆ ಕೊರೋನಾ ಸೋಂಕು ಇಲ್ಲ – https://kundapraa.com/?p=37268 .















