ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ನಮ್ಮಂತೆಯೇ ಮನುಷ್ಯರು. ಅವರನ್ನು ಖೈದಿಗಳು, ರೋಗಿಗಳಂತೆ ನೋಡದೇ ಸರಿಯಾದ ಸಮಯಕ್ಕೆ ಊಟ-ತಿಂಡಿ ವ್ಯವಸ್ಥೆ ಮಾಡಿ, ಅಗತ್ಯ ಸೌಕರ್ಯಗಳನ್ನು ಒದಗಿಸಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕಾರಿಗಳಿಗೆ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಕ್ವಾರಂಟೈನ್ ಕೇಂದ್ರಗಳ ಬಗೆಗೆ ದೂರುಗಳು ಕೇಳಿಬರುತ್ತಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಆಗುವ ತೊಂದರೆ ಬಗ್ಗೆ ಮೊದಲೇ ಅಧಿಕಾರಿಗಳಿಗೆತಿಳಿಸಿದ್ದೆ. ಆದರೆ ಎಲ್ಲವನ್ನೂ ನಾವು ಮಾಡುತ್ತೇವೆ ಎಂದು ಹೇಳಿ ಈಗ ಅವ್ಯವಸ್ಥೆಯಾಗಿದೆ ಎಂದರು.
ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಒಂಭತ್ತು ಕ್ವಾರಂಟೈನ್ ಸೆಂಟರ್‌ಗಳಿಗೆ ದೇವಸ್ಥಾನದ ಊಟ ಪೂರೈಕೆಯಾಗುತ್ತಿದೆ. ಎರಡೇ ವಾಹನದಿಂದ ಊಟ ಸಾಗಾಟವಾಗುತ್ತಿರುವುದರಿಂದ ಕೆಲ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಊಟ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಊಟ ಪೂರೈಕೆಯಲ್ಲಿ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದಲ್ಲಿ ಸಮಿತಿ ರಚಿಸುವ ತನಕವೂ ಎರಡು ವಾಹನಗಳನ್ನು, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಕಿರಣ್ ಕೊಡ್ಗಿ ತಲಾ ಒಂದೊಂದು ವಾಹನ ನೀಡುವುದಾಗಿ ಭರವಸೆ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರೌಢ ಶಾಲೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಿ ಅಲ್ಲಿಯೇ ಊಟವನ್ನು ತಯಾರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಪಂಚಾಯಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಈ ಕೆಲಸ ಮಾಡಬೇಕಿದೆ. ಶೀಘ್ರವೇ ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಸಭೆ ಕರೆದು ಎಲ್ಲರನ್ನೂ ಸೇರಿಸಿ ಪಕ್ಷ ಭೇದ ಮರೆತು ಸಮಿತಿ ರಚನೆ ಮಾಡಬೇಕು. ನಾಳೆ ಏನಾದರೂ ತೊಂದರೆಗಳಾದರೆ ಆ ಸಮಿತಿಯೇ ಅದರ ನೇರ ಹೊಣೆ ಹೊರಬೇಕು. ಹೀಗಾದರೆ ಮಾತ್ರ ಮುಕ್ಕಾಲು ಸಮಸ್ಯೆ ಬಗೆಹರಿದಂತೆ ಆಗುತ್ತದೆ ಎಂಬ ಶಾಸಕರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹೈಸ್ಕೂಲ್‌ಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಬಹುತೇಕ ಹೈಸ್ಕೂಲ್‌ಗಳು ಜನವಸತಿ ಪ್ರದೇಶದಿಂದ ದೂರ ಇರುವುದರಿಂದ ಪ್ರೌಢಶಾಲೆಗಳಲ್ಲೇ ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಿ ದಾನಿಗಳಿಂದ ದಿನಸಿ ವಸ್ತುಗಳನ್ನು ಪಡೆದು ಅಲ್ಲಿಯೇ ಆಹಾರ ತಯಾರಿಸಿ ಕೊಟ್ಟರೆ ಸರಿಯಾದ ಸಮಯಕ್ಕೆ ಊಟ ಕಲ್ಪಿಸಲು ಸಾಧ್ಯ ಎಂದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಟುಂಬಿಕರ ಭೇಟಿಗೆ ಆಗಾಗ್ಗೆ ಬರುವಂತಿಲ್ಲ:
ಕ್ವಾರಂಟೈನ್ ಸೆಂಟರ್‌ನಲ್ಲಿರುವವರನ್ನು ಭೇಟಿಯಾಗಲು ಆಗಾಗ್ಗೆ ಬರುವಂತಿಲ್ಲ. ವಿಶೇಷವಾಗಿ ಅಡುಗೆ ತಯಾರಿಸಿಯೂ ಕೊಡುವಂತಿಲ್ಲ. ಏನಾದರೂ ವಸ್ತುಗಳನ್ನು ಕೊಡುವುದಿದ್ದರೆ ಒಮ್ಮೆಯೇ ಆವರಣದ ಹೊರಗಿನಿಂದಲೇ ಪೊಲೀಸ್ ಸಿಬ್ಬಂದಿಗಳು ಅಥವಾ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಗಳ ಸಮ್ಮುಖವೇ ಕೊಟ್ಟು ಹೋಗಬಹುದು. ವಸ್ತುಗಳನ್ನು ಕೊಡುವಾಗ ಮತ್ತೆ ಅವರಿಂದ ವಾಪಾಸ್ ಪಡೆದುಕೊಳ್ಳುವಾಗ ಸೋಪಿನಿಂದ ತೊಳೆದು ಕೊಡಬೇಕು ಎಂದು ಎಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಬಿಜೆಪಿ ಪಕ್ಷದ ಪ್ರಮುಖರಾದ ಶಂಕರ್ ಅಂಕದಕಟ್ಟೆ, ಕಿರಣ್ ಕೊಡ್ಗಿ, ಕಾಡೂರು ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಗುಣರತ್ನ, ಭಾಸ್ಕರ ಬಿಲ್ಲವ ಮೊದಲಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಭೆಯಲ್ಲಿ ಕುಂದಾಪುರ ತಹಸೀಲ್ದಾರ್ ತಿಪ್ಪೇಸ್ವಾಮಿ, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಎಎಸ್ಪಿ ಹರಿರಾಮ್ ಶಂಕರ್ ಇದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ದುಬೈನಿಂದ ಬಂದಿದ್ದ ಉಡುಪಿ ಜಿಲ್ಲೆಯ 5 ಮಂದಿಗೆ ಕೊರೋನಾ ಪಾಸಿಟಿವ್ – https://kundapraa.com/?p=37564 .
► ಕ್ವಾರಂಟೈನ್‌ನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಡಳಿತ ವಿಫಲ: ಎಚ್ ಹರಿಪ್ರಸಾದ ಶೆಟ್ಟಿ ಆರೋಪ – https://kundapraa.com/?p=37583 .
► ಶಿರೂರು ತಪಾಸಣಾ ಕೇಂದ್ರಕ್ಕೆ ಬೈಂದೂರು, ಕುಂದಾಪುರ ಶಾಸಕರ ಭೇಟಿ – https://kundapraa.com/?37549 .