ಕುಂದಾಪುರ: ಅಕ್ರಮವಾಗಿ ಮಾಂಸಕ್ಕಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿದ ಅಮಾಸೆಬೈಲ್ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಜುಲೈ ೧೦ರಂದು ಬೆಳಿಗ್ಗೆ ೭.೫೦ಕ್ಕೆ ಅಮಾಸೆಬೈಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿರಾಂಡ ಎಸ್ಟೇಟ್ ಎಂಬಲ್ಲಿ ಮಾಮಸಕ್ಕೆಂದು ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಮಹೀಂದ್ರ ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕುತ್ತಿಗೆಯನ್ನು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೂರು ದೊಡ್ಡ ಗಂಡು ಕರುಗಳು ಹಾಗೂ ಒಂದು ಚಿಕ್ಕ ಗಂಡು ಕರುವನ್ನು ವಾಹನದಲ್ಲಿ ತುಂಬಿಸಲಾಗಿತ್ತು. ಈ ಸಂದರ್ಬ ಆರೋಪಿಗಳಾದ ಶಂಕರನಾರಾಯಣ ಗ್ರಾಮದ ಜಡ್ಡು ತಾರೆಮಬೆ ನಿವಾಸಿ ಬಸವ ಕುಲಾಲ್(೩೪), ಕುಪ್ಪಾರು ನಿವಾಸಿ ಚಿಕ್ಕ ಮರಕಾಲ(೭೧), ಹೆದ್ದಾರಿ ಗದ್ದೆ ನಿವಾಸಿ ಶೇಖರ ಶೆಟ್ಟಿ(೬೭) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಹೆಗ್ಗೇರಿ ನಿವಾಸಿಯಾದ ಅಂತಯ್ಯ ಶೆಟ್ಟಿ ಹಾಗೂ ಆತನ ಅಳಿಯ ಪರಾರಿಯಾಗಿದ್ದಾರೆ. ಜಾನುವಾರುಗಳ ಒಟ್ಟು ಮೌಲ್ಯ ಏಳು ಸಾವಿರ ರೂಪಾಯಿಗಳು ಹಾಗೂ ವಾಹನದ ಮೌಲ್ಯ ಒಂದು ಲಕ್ಷ ರೂಪಾಯಿ ಎಮದು ಅಂದಾಜಿಸಲಾಗಿದ್ದು, ಅಮಾಸೆಬೈಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.