ಕುಂದಾಪರ: : ಮಾರಣಕಟ್ಟೆಯ ಸನ್ಯಾಸಿಬೆಟ್ಟಿನಿಂದ ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(8) ತಾಯಿಯೊಂದಿಗೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದು ಎರಡು ದಿನ ಕಳೆದರೂ ಆಕೆಯ ಶವ ಈವರೆಗೆ ಪತ್ತೆಯಾಗಿಲ್ಲ. ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ವಿಸ್ಮಯ ನೀರಿಗೆ ಬಿದ್ದ ಕೂಡಲೇ ಆಕೆಯ ರಕ್ಷಣೆಗೆ ನೀರಿಗೆ ಹಾರಿದರೂ, ತುಂಬಿ ಹರಿಯುತ್ತಿರುವ ನದಿಯಲ್ಲಿ ಆಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದಳು. ಕಾಲುಸಂಕದ ಅನತಿ ದೂರದಲ್ಲಿರುವ ಬಿದಿರು ಗಿಡದ ಬಳಿ ಆಕೆಯು ಧರಿಸಿದ್ದ 2 ಚಪ್ಪಲಿ ಪತ್ತೆಯಾಗಿತ್ತು. ಆದರೆ ಶನಿವಾರ ಸಂಜೆಯ ತನಕವೂ ಈಜುಗಾರರು ಹಾಗೂ ಮುಳುಗುತಜ್ಞರು ನದಿಯಲ್ಲಿ ಹುಡುಕಾಡಿದರೂ ಯಾವುದೇ ಕುರುಹು ಸಿಗದಿರುವುದು ಕುಟುಂಬಿಕರಿಗೆ ಇನ್ನಷ್ಟು ನೋವಿಗೆ ದೂಡಿದೆ. ಕೊಲ್ಲೂರು ಪೊಲೀಸರು ಹಾಗೂ ಮಾರಣಕಟ್ಟೆ, ವಂಡ್ಸೆ, ಚಿತ್ತೂರು ಆಸುಪಾಸಿನ ನಿವಾಸಿಗಳು ಚಕ್ರಾ ನದಿಗೆ ಸೇರುವ ವಂಡ್ಸೆ, ಬೆಳ್ಳಾಲ ಹಾಗೂ ಗಂಗೊಳ್ಳಿ ಹೊಳೆಯವರೆಗೆ ಶೋಧಕಾರ್ಯ ಮುಂದುವರಿಸಿದ್ದರೂ ಶವ ಪತ್ತೆಯಾಗಲಿಲ್ಲ. ಶವವು ಗಂಗೊಳ್ಳಿ ಹೊಳೆಯ ಮೂಲಕ ಸಮುದ್ರ ಪಾಲಾಗಿರಬಹುದೆಂದು ಈಜು ತಜ್ಞರು ಶಂಕಿಸಿದ್ದಾರೆ.
ಈ ನಡುವೆ ವಿಸ್ಮಯಾಳ ಪೋಷಕರು ತಮ್ಮ ಪುತ್ರಿಯ ಮೃತ ಶರೀರವನ್ನು ಹೇಗಾದರೂ ಮಾಡಿ ಹುಡುಕಿಕೊಡಿ ಎಂದು ಸಾಂತ್ವಾನ ಹೇಳಲು ಬರುವವರಲ್ಲಿ ಅಂಗಲಾಚುವ ದೃಷ್ಯ ಮನಕಲುಕುತ್ತಿದೆ.