ಕುಂದಾಪುರ: ಐದನೇ ತರಗತಿಯ ತನಕದ ವಿಧ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಕ್ಲಾಸುಗಳನ್ನು ರದ್ದು ಮಾಡಿರುವ ರಾಜ್ಯದ ಯಡಿಯೂರಪ್ಪ ಸರ್ಕಾರದ ಕ್ರಮ ಸ್ವಾಗತಾರ್ಹ. ಹಾಗೆಯೇ ಅದರ ಮುಂದುವರಿಕೆಯಾಗಿ ಪಿಯುಸಿಯ ತನಕವೂ ಈ ಆನ್‌ಲೈನ್ ಕ್ಲಾಸುಗಳನ್ನು ರದ್ದು ಪಡಿಸುವ ಕುರಿತು ಸರ್ಕಾರ ತೀರ್ಮಾನಕ್ಕೆ ಬರಬೇಕೆಂದು ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಉಸ್ತುವಾರಿ ಕೆ. ಚಂದ್ರಶೇಖರ ಶೆಟ್ಟಿ ಆಗ್ರಹಿಸಿದ್ದಾರೆ.
ಈ ನಾಡಿನ ಜನತೆ ಮೋದಿ ಸರ್ಕಾರದ ಅವೈಜ್ಞಾನಿಕವಾದ ನೋಟು ನಿಷೇಧ ಮತ್ತು ಇದೀಗ ಪೂರ್ವತಯಾರಿ ಇಲ್ಲದ ಲಾಕ್‌ಡೌನ್ ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಆರ್ಥಿಕವಾಗಿ ಸಂಪೂರ್ಣವಾಗಿ ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಕಂಪ್ಯೂಟರ್/ ಲ್ಯಾಪ್‌ಟಾಪ್, ಆಂಡ್ರಾಯ್ಡ್ ಮೊಬೈಲ್ ಕೊಡಿಸಲು ಆ ಹೆತ್ತವರಿಗೆ ಖಂಡೀತವಾಗಿಯೂ ಸಾಧ್ಯವಿಲ್ಲ. ಒಂದು ವೇಳೆ ಅವುಗಳನ್ನು ಕೊಡಿಸಿದರೂ ರಾಜ್ಯದ ಬಹುಭಾಗ ಗ್ರಾಮೀಣ ಪ್ರದೇಶವಾಗಿರುವ ಕಾರಣಕ್ಕಾಗಿ ಅಲ್ಲಿ ಇಂಟರ್‌ನೆಟ್ ಸೇವೆ ಇರಲಾರದು. ಇಂತಹ ಅವ್ಯವಸ್ಥೆಯಲ್ಲಿ ಆನ್‌ಲೈನ್ ಕ್ಲಾಸ್ ಗಳನ್ನು ಆರಂಭಿಸಿದರೆ ಖಂಡಿತವಾಗಿಯೂ ಗ್ರಾಮೀಣ ಪ್ರದೇಶದ ಅದರಲ್ಲೂ ಬಡಮಕ್ಕಳಿಗೆ ಪರಮ ಅನ್ಯಾಯವಾಗಲಿದೆ ಎಂದಿದ್ದಾರೆ.
ಮನೆಯಲ್ಲಿದ್ದ ಟಿವಿ ಹಾಳಾಗಿ ರಿಪೇರಿ ಮಾಡಿಸಲು ಹಣವಿಲ್ಲದ ಕಾರಣಕ್ಕಾಗಿ, ಆನ್‌ಲೈನ್ ಕ್ಲಾಸಿನಲ್ಲಿ ಭಾಗಿಯಾಗಲಾಗದೆ ಮನನೊಂದು ಖಿನ್ನತೆಗೊಳಗಾಗಿ ಕೇರಳದ ಬಡ ಪ್ರತಿಭಾವಂತ ವಿಧ್ಯಾರ್ಥಿನಿಯೊಬ್ಬಳು ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಾಗೂ ಆ ನಂತರ ಪಂಜಾಬ್ ನಲ್ಲಿ ಕೂಡ ಇಂತಹದ್ದೆ ಘಟನೆ ನಡೆದಿರುವುದನ್ನು ನಾವಿನ್ನೂ ಮರೆತಿಲ್ಲ ಹಾಗೆಯೇ ಇತ್ತೀಚೆಗೆ ರಾಜ್ಯ ಸರ್ಕಾರ ಲಾಕ್‌ಡೌನ್ ಕಾರಣಕ್ಕೆ ಮುಂದೂಡಲ್ಪಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ನಡೆಸಿದ ಆನ್‌ಲೈನ್ ಕ್ಲಾಸುಗಳು ತೀರಾ ಕಳಪೆ ಮಟ್ಟದ್ದಾಗಿದ್ದವು. ಹಾಗಾಗಲು ಕಾರಣ ಆನ್‌ಲೈನ್ ಕ್ಲಾಸು ಮಾಡುವ ಮಟ್ಟದ ಪರಿಣಿತ ಶಿಕ್ಷಕರು ಇಲ್ಲದಿರುವುದೇ ಆಗಿದೆ ಹಾಗಾಗಿ ಅದು ಕೇವಲ ಕಾಟಾಚಾರಕ್ಕಾಗಿ ಮಾಡಿದ ಕ್ಲಾಸುಗಳಂತೆ ಇದ್ದವು ಎಂದು ಹಲವು ಪ್ರತಿಭಾವಂತ ವಿಧ್ಯಾರ್ಥಿಗಳೇ ಹೇಳಿಕೊಂಡಿದ್ದಾರೆ. ಆ ಕಾರಣಕ್ಕಾಗಿ ಬಹುಮುಖ್ಯವಾಗಿ ಬಡ ಹಾಗೂ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವ ಕಾರಣಕ್ಕೂ ಆನ್‌ಲೈನ್ ತರಗತಿಗಳಿಗೆ ಸರಕಾರ ಅನುಮೋದನೆ ನೀಡಬಾರದು ಎಂದು ಕೆ. ಚಂದ್ರಶೇಖರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.