ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದ ಗರ್ಭಿಣಿ ಮಹಿಳೆಗೆ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.
ಕೊರೋನಾ ಪಾಸಿಟಿವ್ ಬಂದಿದ್ದ 22 ವರ್ಷದ ಕಾರ್ಕಳ ಮೂಲದ ತುಂಬು ಗರ್ಭಿಣಿ ಮಹಿಳೆ ಜೂನ್ 17 ರಂದು ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ತುರ್ತು ಸಿಸೇರಿಯನ್ ಹೆರಿಗೆಗೆ ಒಳಗಾದರು. ಇಂದು ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗುವಿಗೆ ಕೊರೋನಾ ಪಾಸಿಟಿವ್ ಬಾರದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ತಾಯಿಯನ್ನು ಡಿಸ್ಚಾರ್ಜ್ ಮಾಡುವ ಸಂದರ್ಭ ಮಗುವಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನವಜಾತ ಶಿಶುವಿನ ಆರೈಕೆಯನ್ನು ಡಾ. ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ಅವರು ನೋಡಿಕೊಳ್ಳುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ತಾಯಿ-ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಮಗುವಿನ ಸುರಕ್ಷತೆ ಆದ್ಯತೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ ಎಂದಿರುವುದಲ್ಲದೇ ಇಂತಹ ಕಠಿಣ ಪ್ರಕರಣವನ್ನು ನಿಭಾಯಿಸಿದ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಕೆ. ಭಟ್, ಡಾ ಸುರಭಿ ಸಿನ್ಹಾ, ಅರಿವಳಿಕೆ ತಜ್ಞ ನೀಡಿದ ಡಾ. ರೋಶನ್ ಶೆಟ್ಟಿ ಮತ್ತು ಅವರಿಗೆ ಸಹಕರಿಸಿದ ನರ್ಸ್’ಗಳಾದ ವೆರೋನಿಕಾ, ಅಶ್ವಿನಿ ಮತ್ತು ಜಯಶ್ರೀ ಅವರನ್ನು ಅಭಿನಂದಿಸಿದ್ದಾರೆ.
ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಉಡುಪಿಯ ಜನರಿಗೆ ಸೇವೆ ಸಲ್ಲಿಸುತ್ತಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಂಬಂಧಿತ ಆಸ್ಪತ್ರೆಯಾದ ಡಾ. ಟಿಎಂಎ ಪೈ ಆಸ್ಪತ್ರೆ ಈ ವರ್ಷದ ಏಪ್ರಿಲ್ ಒಂದನೇ ತಾರೀಖಿನಿಂದ ಕೋವಿಡ್ -19ಗೆ ಮೀಸಲಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್-19 ರೋಗಿಗಳಿಗೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ, ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಬುಧವಾರ 4 ಕೊರೋನಾ ಪಾಸಿಟಿವ್ ದೃಢ, ಒಟ್ಟು 908 ಮಂದಿ ಬಿಡುಗಡೆ – https://kundapraa.com/?p=38723 .