ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.19ರ ಶುಕ್ರವಾರ ಒಟ್ಟು 11 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಎರಡನೇ ಸಾವು:
ಮುಂಬೈನಿಂದ ತೆಕ್ಕಟ್ಟೆ ಭಾಗದ 54 ವರ್ಷ ಪ್ರಾಯದ ವ್ಯಕ್ತಿ ಮೃಪಪಟ್ಟಿದ್ದು, ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಮುಂಬೈನಿಂದ ನಾಲ್ವರು ಜೂನ್ 18ರ ಮಧ್ಯಾಹ್ನ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರಿಗೂ ಡಿಸ್ಟಿಕ್ ರಿಸಿವ್ ಸೆಂಟರಿನಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿತ್ತು. ಟೆಂಪ್ರೆಚರ್ ಹೆಚ್ಚಿಲ್ಲದೇ ಇದ್ದುದರಿಂದ ಅವರನ್ನು ಹೋಮ್ ಕ್ವಾರಂಟೈನಿಗೆ ಕಳುಹಿಸಲಾಗಿತ್ತು. ಆದರೆ ಸಂಜೆಯ ವೇಳೆಗೆ ಅವರಲ್ಲಿ ಓರ್ವರು ಮೃತಪಟ್ಟಿದ್ದರು. ಅವರ ಸ್ವ್ಯಾಬ್ ಪರೀಕ್ಷಿಸಿದಾಗ ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿತ್ತು. ಅವರೊಂದಿಗಿದ್ದ, ಉಳಿದ ಮೂವರ ಸ್ವ್ಯಾಬ್ ತೆಗೆದು ಪರೀಕ್ಷೆಗೆ ಕಳುಹಿಸಿ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಸದ್ಯ ಲಭ್ಯವಿರುವ ಮಾಹಿತಿಯಂತೆ ಮೃತ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಅರಶಿನ ಕಾಮಾಲೆ (ಜಾಂಡೀಸ್) ರೋಗದಿಂದ ಬಳಲುತ್ತಿದ್ದರು. ತನ್ನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗಳು ಸಹಿತ ಜೂನ್ 18ರ ಮಧ್ಯಾಹ್ನದಂದು ಮುಂಬಯಿನಿಂದ ತೆಕ್ಕಟ್ಟೆಯ ತನ್ನ ನಿವಾಸಕ್ಕೆ ವಾಹನದಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣ ತಿಳಿದುಬರಲಿದೆ.
ಮೃತದೇಹವನ್ನು ಮನೆಯಲ್ಲೇ ಇರಿಸಿದ್ದರು:
ಮೃತ ವ್ಯಕ್ತಿಯ ಶವವನ್ನು ರಾತ್ರಿ ಪೂರ್ತಿ ಮನೆಯಲ್ಲೇ ಇರಿಸಲಾಗಿತ್ತು. ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಇಲಾಖೆಯ ಗಮನಕ್ಕೆ ತಂದು ಬಳಿಕ ಈ ಮೃತದೇಹವನ್ನು ಇಂದು ಉಡುಪಿಗೆ ರವಾನಿಸಲಾಗಿದೆ.
98 ಸಕ್ರಿಯ ಪ್ರಕರಣ ಬಾಕಿ:
ಜಿಲ್ಲೆಯಲ್ಲಿ ಸದ್ಯ ಒಟ್ಟು 1050 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 950 ಮಂದಿ ಬಿಡುಗಡೆಯಾಗಿದ್ದು, 98 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
13,227 ಮಾದರಿ ಸಂಗ್ರಹ:
ಈ ತನಕ ಒಟ್ಟು 13,227ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 11,946 ನೆಗೆಟಿವ್, 1050 ಪಾಸಿಟಿವ್ ಬಂದಿದ್ದು, 231 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 43 ನೆಗೆಟಿವ್, 11 ಪಾಸಿಟಿವ್ ಬಂದಿದೆ.
ಇದನ್ನೂ ಓದಿ:
► ಕೊರೋನಾಗೆ 2ನೇ ಬಲಿ. ಮಹಾರಾಷ್ಟದಿಂದ ಬಂದಿದ್ದ ತೆಕ್ಕಟ್ಟೆ ಭಾಗದ ವ್ಯಕ್ತಿ ಸಾವು – https://kundapraa.com/?p=38790 .