ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.20 ರ ಶನಿವಾರ ಒಟ್ಟು 13 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ 10 ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ಒಂದು ಸ್ಥಳೀಯ ಪ್ರಕರಣ, ಒಂದು ಅಂತರ್ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಒಂದು ಪ್ರಕರಣದ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇವರಲ್ಲಿ 8 ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದಾರೆ.
ನಿನ್ನೆ ಮೃತಪಟ್ಟಿದ್ದ ತೆಕ್ಕಟ್ಟೆ ಭಾಗದ ವ್ಯಕ್ತಿಯ ಜೊತೆಗೆ ಬಂದಿದ್ದ ಅವರ ಪತ್ನಿ ಹಾಗೂ ಮಗಳಿಗೂ ಪಾಸಿಟಿವ್ ಬಂದಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
13,300 ಮಾದರಿ ಸಂಗ್ರಹ:
ಈ ತನಕ ಒಟ್ಟು 13,300ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,055 ನೆಗೆಟಿವ್, 1063 ಪಾಸಿಟಿವ್ ಬಂದಿದ್ದು, 182 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 109 ನೆಗೆಟಿವ್, 13 ಪಾಸಿಟಿವ್ ಬಂದಿದೆ.
102 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಸದ್ಯ ಒಟ್ಟು 1063 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 959 ಮಂದಿ ಬಿಡುಗಡೆಯಾಗಿದ್ದು, 102 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಹೋಂ ಕ್ವಾರಂಟೈನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ:
ಹೋಂ ಕ್ವಾರಂಟೈನ್ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶ ಹಾಗೂ ಕೋವಿಡ್ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹೊರಡಿಸಲಾಗಿರುವ ಇತರೆ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅಧಿಕಾರಿವನ್ನು ಡಿಸಾಸ್ಟರ್ ಮೆನೇಜ್ಮೆಂಟ್ ಆಕ್ಟ್ 2005, ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ಐಪಿಸಿ ಸೆಕ್ಷನ್ 188 ಪ್ರಕಾರ, ಹೋಂ ಕ್ವಾರಂಟೈನ್ ಬಗ್ಗೆ ನಿಗಾ ಇರಿಸುವ ಪ್ಲೈಯಿಂಗ್ ಸ್ಕ್ವ್ಯಾಡ್ ಅಧಿಕಾರಿಗಳಿಗೆ ಮತ್ತು ಪೌರಾಯುಕ್ತರು ಉಡುಪಿ ನಗರಸಭೆ, ಮುಖ್ಯಾಧಿಕಾರಿಗಳು ಕುಂದಾಪುರ/ಕಾರ್ಕಳ/ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ಇವರಿಗೆ ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ:
ಕೋವಿಡ್-19 ಸೋಂಕು ಜನಸಾಮಾನ್ಯರಲ್ಲಿ ಯಾರಿಗೂ ಸಹ ಹರಡಬಹುದಾಗಿದ್ದು, ಶೀಘ್ರ ಪತ್ತೆ/ ತ್ವರಿತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಬಹುದಾಗಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಯಾವುದೇ ಜ್ವರ /ಕೆಮ್ಮು/ಉಸಿರಾಟದ ತೊಂದರೆ ಮುಂತಾದ ಕೋವಿಡ್ ಲಕ್ಷಣಗಳು ಬಂದಲ್ಲಿ ಹತ್ತಿರದ ಜ್ಬರ ತಪಾಸಣಾ ಕೇಂದ್ರಕ್ಕೆ ಹೋಗಿ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮಹಾರಾಷ್ಟ್ರ ಹಾಗೂ ಇತರ ಸ್ಥಳಗಳಿಂದ ಆಗಮಿಸಿದ ಅನೇಕರಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು ಎಲ್ಲರನ್ನೂ ಚಿಕಿತ್ಸೆಗೊಳಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 13 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಕೋವಿಡ್ 19 ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ಪರೀಕ್ಷಿಸಿ ಸೋಂಕು ಇದ್ದಲ್ಲಿ ತಕ್ಷಣವೇ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಮುಖ್ಯವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸರ್ವೆಲೈನ್ಸ್ ಚುರುಕುಗೊಳಿಸಿದ್ದು ಯಾವುದೇ ಸಂಶಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಖಿನ್ನ ವ್ಯಕ್ತಿಗಳನ್ನು ಗುರುತಿಸಿ ಸೋಂಕು ತಗಲದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ತಂಡ ರಚಿಸಲಾಗಿದೆ.
ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಈಗಾಗಲೇ 10 ಜ್ವರ ತಪಾಸಣೆ ಕ್ಲಿನಿಕ್ ಗಳನ್ನು, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಸರ್ಕಾರಿ ಆಸ್ಪತ್ರೆ ಕುಂದಾಪುರ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಜಿಲ್ಲಾ ಆಸ್ವತ್ರೆ ಉಡುಪಿ,ಕೆ.ಎಂ.ಸಿ ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಮತ್ತು ತಾಲೂಕು ಆಸ್ಪತ್ರೆ ಕಾರ್ಕಳ ಇಲ್ಲಿ ಸ್ಥಾಪಿಸಲಾಗಿದೆ.
ಜ್ವರ ತಪಾಸಣೆ ಕ್ಲಿನಿಕ್ ಗಳಲ್ಲಿ ಕೋವಿಡ್ 19 ಸಂಶಯಾತ್ಮಕ ಪ್ರಕರಣಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಗಂಟಲು ಮಾದರಿ ಸಂಗ್ರಹಿಸುವ ಹಾಗೂ ಕೋವಿಡ್ ಅಲ್ಲದ ಇತರ ಜ್ವರ ಪ್ರಕರಣಗಳನ್ನು ಯೋಗ್ಯವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ದೊಡ್ಡ ಖಾಸಗಿ ಆಸ್ವತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಪ್ರತ್ಯೇಕ ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದರಿಂದ ಉಳಿದ ರೋಗಿಗಳಿಗೆ ಮತ್ತು ಆಸ್ವತ್ರೆ ಸಿಬ್ಬಂದಿಗಳಿಗೆ ಸೋಂಕು ಹರಡುವುದು ತಪ್ಪಿಸಬಹುದಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಳ ಪ್ರದೇಶಗಳಿಂದ ಬರುವ ರೋಗಿಗಳಿಗಾಗಿ ಪ್ರತ್ಯೇಕ ತಪಾಸಣೆ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ದಾಪುರದಲ್ಲಿ ಜ್ವರ ತಪಾಸಣ ಕೇಂದ್ರ ಸ್ಥಾಪಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಆರಂಭಗೊಳ್ಳಲಿದೆ.