ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ಕ್ಷೇತ್ರಕ್ಕೆ 900 ಕೋಟಿ ರೂ.ಗಳ ಅನುದಾನ ಬಂದಿದ್ದು, ಕೊರೊನಾದಿಂದ ಅಭಿವೃದ್ದಿ ವೇಗಕ್ಕೆ ತಡೆಯಾಗಿದೆ. ರಾಜ್ಯದ ನಾಲ್ಕು ವಿಧಾನ ಸಭಾ ಕ್ಷೇತ್ರಕ್ಕೆ ಕುಡಿಯುವ ನೀರು ಯೋಜನೆಗೆ ನೀಡುವ 200 ಕೋಟಿ ರೂಪಾಯಿ ಬೈಂದೂರು ಕ್ಷೇತ್ರಕ್ಕೂ ದೊರಕಿದೆ. ವಾರಾಹಿ ನೀರನ್ನು ಬಳಸಿಕೊಂಡು ಬೈಂದೂರು ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. 76 ಕೋಟಿ ವೆಚ್ಚದಲ್ಲಿ ಸೌಕೂರಿನಲ್ಲಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು 8 ಗ್ರಾಮಗಳಿಗೆ ನೀರು ದೊರಕಲಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ವಂಡ್ಸೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ, ಸರಕಾರಿ ಕಛೇರಿಗಳ ಸಂಕೀರ್ಣದಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯ, ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್ ಉದಯ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಿವೆ. ಸಂಕುಚಿತ ಮನೋಭಾವ ಬಿಟ್ಟು ಅಭಿವೃದ್ದಿಯನ್ನು ಗುರುತಿಸಬೇಕು. ಶೈಕ್ಷಣಿಕವಾಗಿ ವಂಡ್ಸೆ ಇನ್ನೂ ಬೆಳೆಯಬೇಕು ಎಂದರು.
ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮಾತನಾಡಿ, ವಂಡ್ಸೆ ಪಂಚಾಯತ್ ಸಾಕಷ್ಟು ಅಭಿವೃದ್ದಿ ಕಂಡಿದೆ. ವಂಡ್ಸೆಗೊಂದು ವ್ಯವಸ್ಥಿತ ಮಾರುಕಟ್ಟೆ ರಚನೆಯಾಗಬೇಕಿದೆ. ವಂಡ್ಸೆಯಲ್ಲಿ ಸಭಾಭವನದ ಕೊರತೆ ಇತ್ತು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆ ಮೂಲಕ 14 ಲಕ್ಷ ಅನುದಾನ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ 20ಲಕ್ಷ ಅನುದಾನದ ಮೂಲಕ ಸಭಾಭವನದ ಕಾಮಗಾರಿ ನಡೆಯುತ್ತಿದೆ. ಸುಮಾರು 1,000 ಜನರ ಸಾಮರ್ಥ್ಯದ ಸಭಾಭವನ ಸುಸಜ್ಜಿತವಾಗಿ ಪೂರ್ಣಗೊಳಿಸಲು ಇನ್ನೂ 50 ಲಕ್ಷ ಅನುದಾನದ ಅವಶ್ಯಕತೆ ಇದೆ. ವಂಡ್ಸೆಯ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿಯ ಕೊರತೆ ಇದೆ. ಎಸ್.ಎಲ್.ಆರ್.ಎಂ ಘಟಕವನ್ನು 2 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ, ತರಬೇತಿ ಕೇಂದ್ರ ಮಾಡಲಾಗುತ್ತಿದ್ದು, ಶಾಸಕರು 20 ಲಕ್ಷ ಅನುದಾನ ಒದಗಿಸಿದ್ದಾರೆ. ಇನ್ನೂ ಕೂಡಾ ಅನುದಾನದ ಅವಶ್ಯಕತೆ ಇದೆ ಎಂದರು.
ತಾಲೂಕು ಪಂಚಾಯತ್ ಸದಸ್ಯ ಉದಯ ಜಿ.ಪೂಜಾರಿ, ಶಿಶು ಅಭಿವೃದ್ದಿ ಅಧಿಕಾರಿ ಶ್ವೇತಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಕೊಲ್ಲೂರು ಠಾಣೆಯ ಠಾಣಾಧಿಕಾರಿ ಮಹಾದೇವ ಬೊಸ್ಲೆ , ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿಗೆ ನರಸಿಂಹ ಮೊಗವೀರ ಅವರು ಟಿ.ವಿ., ಸುಜಾತ ಕೆಳಮನೆ ಫ್ಯಾನ್‌ನ್ನು ಕೊಡುಗೆಯಾಗಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ ಮೂಕಾಂಬು ಸ್ವೀಕರಿಸಿದರು.ಅಂಗನವಾಡಿ ಕಟ್ಟಡ, ಪ್ರಯಾಣಿಕರ ತಂಗುದಾಣ ನಿರ್ಮಾಣದ ಗುತ್ತಿಗೆದಾರರಾದ ಸಂದೇಶ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಮೂಕಾಂಬು ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರೂಪಾ ಗೋಪಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸುಮಾರು 8 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡಿದ್ದು, ಎನ್.ಆರ್.ಇ.ಜಿ 5 ಲಕ್ಷ, ಶಿಶು ಅಭಿವೃದ್ದಿ ಇಲಾಖೆ 3 ಲಕ್ಷ ಅನುದಾನ ಒದಗಿಸಿತ್ತು. ವಂಡ್ಸೆಯ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಸ್ವಚ್ಛ ಭಾರತ್ ಮಿಷನ್ ಅನುದಾನ 1.80 ಸಾವಿರ , ಪಂಚಾಯತ್ ಅನುದಾನ 20ಸಾವಿರ ಬಳಸಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. 1.5 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ.