ಕುಂದಾಪುರ: ಸಂಘಟನೆಗಳು ಪ್ರೇರಣಾಶಕ್ತಿಯಾಗಬೇಕೇ ವಿನಹ: ಪ್ರಚೋದನಕಾರಿ ಶಕ್ತಿಯಾಗಬಾರದು. ನಿಸ್ವಾರ್ಥ ಸೇವೆ ಮೂಲಕ ಸಂಘಟನೆಗಳನ್ನು ಬೆಳೆಸಬೇಕು. ಗ್ರಾಮದ ಸಮಸ್ಯೆಗಳಿಗೆ ದಾರಿ ತೋರಿಸಿ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಬೇಕು. ಗಂಗೊಳ್ಳಿಯಲ್ಲಿ ಎಲ್ಲಾ ಸಮಾಜದ ಜನರನ್ನು ಒಟ್ಟಿಗೆ ಕೊಂಡೊಯ್ದು ಸೌಹಾರ್ದ ವಾತಾವರಣ ನಿರ್ಮಿಸುವ ಕೆಲಸ ನಡೆಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗಂಗೊಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಲಯದ ಎಲ್ಲಾ ವರ್ಗದ ಸಮಾಜಬಾಂಧವರನ್ನು ಒಗ್ಗೂಡಿಸಿ ಅವರು ಬೌದ್ಧಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಮಾಡುವ ಗುರಿಯನ್ನಿಟ್ಟುಕೊಂಡು ಸಮುದಾಯಕ್ಕೆ ನೆರಳು ನೀಡುವ ಉದ್ದೇಶದಿಂದ ರಚನೆಗೊಂಡಿರುವ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯು ಗಂಗೊಳ್ಳಿಯ ಜನರ ಬಾಳಿಗೆ ಬೆಳಕಾಗಲಿದೆ ಎಂದು ಅವರು ಹೇಳಿದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಶುಭ ಹಾರೈಸಿದರು. ಇದೇ ಸಂದರ್ಭ ಗಂಗೊಳ್ಳಿಯ ಜಯಶ್ರೀ ಖಾರ್ವಿ ಮತ್ತು ಶಾರದಾ ಖಾರ್ವಿ ಅವರಿಗೆ ಸಹಾಯಧನ ವಿತರಿಸಲಾಯಿತು. ಸಮಿತಿಯ ಉಪಾಧ್ಯಕ್ಷ ರಾಮಚಂದ್ರ ಬಿ.ಖಾರ್ವಿ, ಪ್ರಧಾನ ಕಾರ್ಯದರ್ಶಿ ಜಯರಾಮ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಜಿ.ಭಾಸ್ಕರ ಖಾರ್ವಿ ಸ್ವಾಗತಿಸಿದರು. ಗೌರವಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.