ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪರೀಕ್ಷಾ ಕೇಂದ್ರವೊಂದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೋರ್ವರಿಗೆ ಕೋವಿಡ್-೧೯ ಪಾಸಿಟಿವ್ ಇರುವುದು ದೃಢವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಆಕೆ ಪರೀಕ್ಷೆ ಬರೆದ ಕೊಠಡಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ವಿದ್ಯಾರ್ಥಿನಿ ಈಗಾಗಲೇ ಎರಡು ಪರೀಕ್ಷೆಗಳನ್ನು ಬರೆದಿದ್ದು, ಸೋಮವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೊಠಡಿಗೆ ಹಾಜರಾಗುವ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದ್ದು ಈ ಸಂದರ್ಭ ಆಕೆಗೆ ಜ್ವರದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿತ್ತು. ಬಳಿಕ ಸ್ವ್ಯಾಬ್ ತೆಗೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರ ವರದಿ ಇಂದು ದೊರೆತಿದ್ದು, ಪಾಸಿಟಿವ್ ಇರುವುದು ದೃಢಪಟ್ಟಿದೆ.
ವಿದ್ಯಾರ್ಥಿನಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದ್ದು, ಅದನ್ನು ಸೀಲ್‌ಡೌನ್ ಮಾಡಲಾಗಿದೆ. ಪೊಷಕರು ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ವಿದ್ಯಾರ್ಥಿನಿಯ ಮನೆಯ ಓರ್ವರು ಮುಂಬಯಿಯಿಂದ ಬಂದು ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದು, ಅವರಿಂದ ವಿದ್ಯಾರ್ಥಿನಿಗೂ ಪಾಸಿಟಿವ್ ಬಂದಿರುವ ಶಂಕೆ ಇದೆ. ಮರವಂತೆಯ ಆಕೆ ನಿವಾಸವನ್ನೂ ಸೀಲ್‌ಡೌನ್ ಮಾಡಲಾಗುತ್ತದೆ ಎನ್ನಲಾಗಿದೆ.