ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಪ್ರಾರಂಭವಾದ ಸಮೃದ್ಧ ಸಂತೆ ಕೀರ್ತಿ ಕುಂದಾಪುರಕ್ಕೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.
ಕಲಾಕ್ಷೇತ್ರ – ಕುಂದಾಪುರ ಮತ್ತು ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ‘ಬ್ರಿಟಿಷರ ಕಾಲದಲ್ಲಿ ಕುಂದಾಪುರದಲ್ಲಿ ತಹಶೀಲ್ದಾರರಾಗಿದ್ದ ಮಾರ್ಷಲ್ ಕೊಯ್ಲಿ ಮೊದಲು ಕುಂದಾಪುರದಲ್ಲಿ ಸಂತೆ ಪ್ರಾರಂಭ ಮಾಡಿರುವ ಬಗ್ಗೆ ಉಲ್ಲೇಖವಿದೆ’ ಎಂದರು.
ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಮಾತನಾಡಿ, ‘ಕುಂದಾಪುರದವರ ಶಿಷ್ಟ ಕನ್ನಡ ಮಾತಿನಲ್ಲಿ ಒಂದಾದರೂ ಕುಂದಾಪ್ರ ಕನ್ನಡ ಶಬ್ದ ಬಳಕೆಯಾಗಿಯೇ ಆಗುತ್ತದೆ. ಇದು ಈ ಭಾಷೆಯ ವಿಶೇಷತೆ’ ಎಂದು ಹೇಳಿದರು.
ಕುಂದಾಪ್ರ ಕನ್ನಡ ವಾಗ್ಮಿ, ಶಿಕ್ಷಕ ಮನು ಹಂದಾಡಿ ಮಾತನಾಡಿ, ‘ಕೇಶಿರಾಜನ ‘ಶಬ್ದ ಮಣಿದರ್ಪಣ’ದಲ್ಲಿ ಬಳಕೆಯಾದ ಶಬ್ದಗಳನ್ನು ಇಂದಿಗೂ ಕುಂದಾಪ್ರ ಕನ್ನಡದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ’ ಎಂದರು.
ಕುಂದಾಪ್ರ ಡಾಟ್ ಕಾಂ ಯುಟ್ಯೂಬ್ ಚಾನೆಲ್ ಹಾಗೂ ಫೇಸ್ಬುಕ್ ಮೂಲಕ ವಿಶ್ವದಾದ್ಯಂತ ಜನರು ಏಕಕಾಲದಲ್ಲಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ’ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.
ಪ್ರಮುಖರಾದ ಪ್ರವೀಣ್ ಕುಮಾರ್ ಟಿ., ಕೆ. ಆರ್. ನಾಯ್ಕ್, ದಾಮೋದರ್ ಪೈ, ಶ್ರೀಧರ ಸುವರ್ಣ, ತ್ರಿವಿಕ್ರಮ ಪೈ, ಗೋಪಾಲ ವಿ., ಸುರೇಶ್ ನಾಯ್ಕ್, ರಾಜೇಶ್ ಕಾವೇರಿ, ಗಿರೀಶ್ ಜಿ.ಕೆ, ಪ್ರಶಾಂತ ಸಾರಂಗ್, ಸಾಯಿನಾಥ ಶೇಟ್, ಭರತ್ ನಾಯ್ಕ್, ಹೇಮಾ ಆರ್. ಕುಂದಾಪುರ ಮೊದಲಾದವರು ಇದ್ದರು.