ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವರು ಕಳ್ಳತನ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಗಂಗೊಳ್ಳಿಯಲ್ಲಿರುವ ಬಿಡಾಡಿ ಜಾನುವಾರುಗಳನ್ನು ಹಿಡಿದು ಬುಧವಾರ ನೀಲಾವರ ಗೋಶಾಲೆಗೆ ಸಾಗಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಹಾಗೂ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಅನೇಕ ಜಾನುವಾರುಗಳು ಗೋಕಳ್ಳರ ಪಾಲಾಗಿತ್ತು. ಹೀಗಾಗಿ ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ನಿರ್ಧಾರ ಕೈಗೊಂಡ ಹಿಂಜಾವೇ ಕಾರ್ಯಕರ್ತರು, ಕಳೆದ ನಾಲ್ಕೈದು ದಿನಗಳಿಂದ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯ ನಡೆಸಿದ್ದರು. ಹೀಗೆ ಹಿಡಿದ ಸುಮಾರು ೨೪ ಜಾನುವಾರುಗಳನ್ನು ಬುಧವಾರ ವಾಹನಗಳಲ್ಲಿ ನೀಲಾವರ ಗೋಶಾಲೆಗೆ ಸಾಗಿಸಿದ್ದಾರೆ. ಹಿಂಜಾವೇ ಕಾರ್ಯಕರ್ತರ ಈ ಕಾರ್ಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುವೇದ ದೇವಾಡಿಗ, ಬೈಂದೂರು ಕಾರ್ಯಕಾರಣಿ ಸದಸ್ಯ ರತ್ನಾಕರ ಗಾಣಿಗ, ಬೈಂದೂರು ಪ್ರಧಾನ ಕಾರ್ಯದರ್ಶಿ ನವೀನ ದೊಡ್ಡಹಿತ್ಲು, ಸಹ ಕಾರ್ಯದರ್ಶಿ ಮೋಹನ ಖಾರ್ವಿ, ಸಹ ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಯಶವಂತ ಖಾರ್ವಿ ನೇತೃತ್ವದಲ್ಲಿ ಹಿಂಜಾವೇ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.