ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಥಿಲವಾಗಿದ್ದ ಮರವಂತೆ ಇಲಾಖೇತರ ಉಪ ಅಂಚೆ ಕಚೇರಿ ಕಟ್ಟಡವನ್ನು ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ನೆರವಿನೊಂದಿಗೆ ರೂ 69,000 ವೆಚ್ಚದಲ್ಲಿ ಹಿಂದೆ ಪೋಸ್ಟ್‌ಮಾಸ್ಟರ್ ಆಗಿದ್ದ ಎಂ. ವಾಸುದೇವ ಭಟ್ ಸ್ಮರಣೆಯಲ್ಲಿ ನವೀಕರಿಸಿದ್ದು, ಅದನ್ನು ಅವರ ಪುತ್ರ ಎಂ. ನಾಗೇಂದ್ರ ಭಟ್ ಬುಧವಾರ ಉದ್ಘಾಟಿಸಿದರು.
ಕಚೇರಿಯ ಕೀಲಿಕೈಯನ್ನು ಪೋಸ್ಟ್ ಮಾಸ್ಟರ್ ಮಂದಾಕಿನಿ ಅವರಿಗೆ ಹಸ್ತಾಂತರಿಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಅಂಚೆ ಕಚೇರಿ ಊರಿನ ಕೇಂದ್ರ ಸ್ಥಾನದಲ್ಲಿ ಇರಬೇಕೆಂಬ ಕಾರಣಕ್ಕೆ ಹಿಂದೆ ಗ್ರಾಮ ಪಂಚಾಯಿತಿ ತನ್ನ ಕೊಠಡಿಯನ್ನು ಉಚಿತವಾಗಿ ನೀಡಿತ್ತು. ಮುಂದೆಯೂ ಗ್ರಾಮ ಪಂಚಾಯಿತಿ ಅದನ್ನು ಸಾರ್ವಜನಿಕ ಸೇವೆ ಎಂದು ಪರಿಗಣಿಸಿ ಯಾವುದೇ ಬಾಡಿಗೆ ಪಡೆಯದೆ ಬಳಸಲು ಅವಕಾಶ ನೀಡಬೇಕು ಎಂದು ಆಶಿಸಿದರು.
ನವೀಕರಣದ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ ಪೂಜಾರಿ ಸ್ವಾಗತಿಸಿದರು. ಕರಸಂಗ್ರಾಹಕ ಶೇಖರ ಮರವಂತೆ ವಂದಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್, ಕಾರ್ಯದರ್ಶಿ ಪಾರ್ವತಿ, ಅಂಚೆ ಮೇಲ್ವಿಚಾರಕ ಭಾಸ್ಕರ್, ದಾನಿಗಳಾದ ಸತೀಶ ಪೂಜಾರಿ, ಕೃಷ್ಣಯ್ಯ ಆಚಾರ್ಯ, ನಾಗಮ್ಮ ಪೂಜಾರಿ, ಎಂ. ಶಂಕರ ಬಿಲ್ಲವ, ಸೋಮಯ್ಯ ಬಿಲ್ಲವ, ಅಂತೋನಿ ಡಿಸೋಜ, ದೇವಿದಾಸ ಶ್ಯಾನುಭಾಗ್, ಪಂಚಾಯಿತಿ ಸಿಬ್ಬಂದಿ ಗುರುರಾಜ್, ಪ್ರಭಾಕರ ಇದ್ದರು.