ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಾವಧಿ ವೈದ್ಯಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲೆ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ಬುಧವಾರ ಭೇಟಿ ಮಾಡಿದ ಉಡುಪಿ ಜಿಲ್ಲೆ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷೆ ಡಾ. ವೀಣಾ ಎನ್.ಕಾರಂತ ನೇತೃತ್ವದ ನಿಯೋಗ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಾವಧಿ ವೈದ್ಯಾಧಿಕಾರಿಗಳ ಕೆಲವು ಬೇಡಿಕೆಗಳ ಬಗ್ಗೆ ಗಮನ ಸೆಳೆದು ಮನವಿ ಸಲ್ಲಿಸಿತು.
ಈಗಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿರುವಂತೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವರದಿಗನುಗುಣವಾಗಿ (CGHS Pay Scale) ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಿಗೆ ಸರಿಸಮಾನ ವೇತನ-ಭತ್ಯೆಗಳನ್ನು ಮಂಜೂರು ಮಾಡಬೇಕು. ಕೊವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಆಯುಷ್ ವೈದ್ಯಪದ್ಧತಿಗಳ ಚಿಕಿತ್ಸೆಯನ್ನು ಕನಿಷ್ಠ ಸ್ವಯಂ ಅಪೇಕ್ಷೆ ಪಡುವವರಿಗೆ ಒದಗಿಸಲು ಅವಕಾಶ ನೀಡಬೇಕು. ಕೊವಿಡ್-19 ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಆಯುಷ್ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ಯೋಜನೆಯನ್ನು ವಿಸ್ತರಿಸಬೇಕು. ಆಯುಷ್ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು. 2013ಕ್ಕಿಂತ ಮೊದಲು ಬಡ್ತಿ ಹೊಂದಿ ಹಿರಿಯ ವೈದ್ಯಾಧಿಕಾರಿಗಳಾಗಿ ಬಡ್ತಿ ಹೊಂದಿದ ವೈದ್ಯಾಧಿಕಾರಿಗಳಿಗೆ ವೇತನದ ವ್ಯತ್ಯಾಸವನ್ನು ಸರಿಪಡಿಸಬೇಕು. ಆಯುಷ್ ಇಲಾಖೆಯಲ್ಲಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಯಡಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳ ವೇತನವನ್ನು ಹೆಚ್ಚಿಸಿ, ಕೂಡಲೇ ಅವರ ಸೇವಾ ಖಾಯಮಾತಿ ಮಾಡಬೇಕು. ಗುತ್ತಿಗೆ ವೈದ್ಯಾಧಿಕಾರಿಗಳ ಸೇವಾವಧಿಯನ್ನು ನಿವೃತ್ತಿ ಹೊಂದುವ ಸಂದರ್ಭದಲ್ಲಿ ನಿವೃತ್ತಿ ಸೇವಾ ಸೌಲಭ್ಯಗಳಿಗೆ ಗುತ್ತಿಗೆ ಸೇವಾ ಅವಧಿಯನ್ನು ಪರಿಗಣಿಸುವಂತೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್-19 ಕಾರಣದಿಂದ ಮಾರ್ಚ್ 2020ರಿಂದ ನಿವೃತ್ತಿಯಾದವರ ಸೇವಾವಧಿಯನ್ನು 2 ರಿಂದ 6 ತಿಂಗಳು ವಿಸ್ತರಿಸಿ, ಆಯುಷ್ ಇಲಾಖೆಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಿರುವಂತೆ ಇಲಾಖೆಯ ವೈದ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಅನ್ವಯವಾಗುವ ಎಲ್ಲ ವೇತನ-ಭತ್ಯೆ-ಸ್ಥಾನಮಾನಗಳನ್ನು ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಿಗೂ ಅನ್ವಯಿಸಬೇಕು. ಆಯುಷ್ ಇಲಾಖೆಯಲ್ಲಿ ಶೀಘ್ರವಾಗಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಲಾಯಿತು.
ಜಿಲ್ಲಾ ಆಯುಷ್ ಕೋವಿಡ್ ನೋಡೆಲ್ ಅಧಿಕಾರಿ ಡಾ. ಅಶೋಕ ಎಚ್., ಸಂಘದ ಉಪಾಧ್ಯಕ್ಷ ಡಾ. ಪ್ರದೀಪ ಶೆಟ್ಟಿ, ಕಾರ್ಯದರ್ಶಿ ಡಾ. ಸಂಧ್ಯಾ ಕುಮಾರಿ, ಖಜಾಂಚಿ ಡಾ. ಪೂರ್ಣಿಮಾ ಪೈ, ರಾಜ್ಯ ಪ್ರತಿನಿಧಿ ಡಾ. ನಾಗರಾಜ ಜೌಲಗಿ, ಡಾ. ದಿನಕರ ಡೊಂಗ್ರೆ ಮತ್ತಿತರರು ಉಪಸ್ಥಿತರಿದ್ದರು.