ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯೊಳಕ್ಕೆ ಕುಬ್ಜಾ ನದಿ ನೀರು ನುಗ್ಗಿದ್ದು, ವಾಡಿಕೆಯಂತೆ ದೇವಿಯ ಪಾದ ತೊಳೆದಿದೆ. ಈ ಸಂದರ್ಭ ಸುತ್ತಲೂ ಜಲಾವೃತವಾಗಿ ನೀರಿನ ಮಧ್ಯೆ ಕುಳಿತಿರುವ ದೇವಿಯನ್ನು ಕಂಡು ಭಕ್ತರು ಪುನೀತರಾದರು.
ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಗಳವಾರ ಸಂಜೆಯ ವೇಳೆಗೆ ನದಿಯ ನೀರು ಉಕ್ಕಿ ಹರಿದಿದೆ. ದೇವಳದ ಗರ್ಭಗುಡಿ ಜಲಾವೃತ ಆಗುತ್ತಿದ್ದಂತೆ ದೇವಿಗೆ ಅರ್ಚಕರು ಆರತಿ ಬೆಳಗಿದರು. ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ಅಭಿಷೇಕವಾಗುತ್ತದೆ. ಕೊರೋನಾ ಕಾರಣದಿಂದ ಭಕ್ತರ ಸಂಖ್ಯೆ ವಿರಳವಾಗಿತ್ತು. ದೇವಳದ ಮೊಕ್ತೇಸರರು, ಅರ್ಚಕರು ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕಿನ ಕಮಲಶಿಲೆ ಹಚ್ಚಹಸಿರಿನ ಕಾಡಿನ ಮಧ್ಯಭಾಗದಲ್ಲಿ ಪವಿತ್ರವಾದ ಕುಬ್ಜೆ ಹರಿಯುತ್ತಿದ್ದು, ನದಿಯ ತಟದಲ್ಲಿ ಪ್ರಾಚೀನ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.


















