ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಗಾಳಿ ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನದಿ ಪಾತ್ರದ ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ. ಮಂಗಳವಾರ ನಡುರಾತ್ರಿಯ ತನಕ ಏರುಗತಿಯಲ್ಲೇ ಇದ್ದ ಮಳೆ, ಗಾಳಿ ಆ ಬಳಿಕ ಕಡಿಮೆಯಾಗಿದೆ. ಬುಧವಾರ ಹಗಲು ದಟ್ಟ ಮೋಡವಿತ್ತಾದರೂ ಮಳೆ ಪ್ರಮಾಣ ಕಡಿಮೆ ಇತ್ತು.
ಬಡಾಕೆರೆ, ನಾಡ ಕಡ್ಕೆ, ಪಡುಕೋಣೆ, ತೆಂಗಿನಗುಂಡಿ, ಸೇನಾಪುರ, ಕುಂಬಾರಮಕ್ಕಿ, ಕಟ್ಟು, ಹಕ್ಲಾಡಿ ಗ್ರಾಮದ ಬಟ್ಟೆಕುದ್ರು, ಯಳೂರು, ತಪ್ಲು ಪ್ರದೇಶದಲ್ಲಿ ನೆರೆಯಿಂದ ಆವೃತ್ತವಾಗಿತ್ತು. ಉಭಯ ತಾಲೂಕುಗಳ ಚಕ್ರಾ, ಸೌಪರ್ಣಿಕಾ, ವಾರಾಹಿ, ಕುಬ್ಜಾ. ಖೇಟಕಿ ನದಿಗಳು ತುಂಬಿ ಹರಿದಿತ್ತು. ವಿಪರೀತ ಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿ ರಾತ್ರಿ ಭಾಗಶಃ ಬೈಂದೂರು ಕುಂದಾಪುರ ಕತ್ತಲಲ್ಲಿ ಕಳೆಯುವಂತಾಗಿತ್ತು. ಬುಧವಾರ ಮಧ್ಯಾಹ್ನದ ವೇಳೆಗೆ ಕೆಲವೆಡೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿತ್ತು.
ತಗ್ಗಿದ ಪ್ರವಾಹ:
ನದಿಗಳಲ್ಲಿ ರಾತ್ರಿಯ ಬಳಿಕ ಪ್ರವಾಹದ ಮಟ್ಟ ಕುಸಿದಿದೆ. ಜಲಾವೃತಗೊಂಡ ನದಿಬದಿಯ ಮತ್ತು ನದಿ ನಡುವಿನ ದ್ವೀಪಗಳ ಜನರು, ಮುಖ್ಯವಾಗಿ ನಾವುಂದದ ಸಾಲುಬುಡ ಮತ್ತು ಕುದ್ರು ನಿವಾಸಿಗಳು ಮಂಗಳವಾರ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು. ಕೆಲವರು ತಮ್ಮ ಜಾನುವಾರುಗಳನ್ನೂ ಸಾಗಿಸಿದ್ದರು. ನೆರೆ ಇಳಿಮುಖವಾದ ಕಾರಣ ಬುಧವಾರ ಕೆಲವರು ತಮ್ಮ ಮನೆಗಳಿಗೆ ತೆರಳಿದರು. ಇನ್ನೂ ಜಲಾವೃತವಾಗಿರುವ ಸ್ಥಳಗಳ ನಿವಾಸಿಗಳು ಬುಧವಾರವೂ ಸಂಚಾರಕ್ಕೆ ದೋಣಿ ಆಶ್ರಯಿಸಿದರು.
ಗಾಳಿ, ಮಳೆಯ ಕಾರಣದಿಂದ ಮಂಗಳವಾರ ಮತ್ತು ಬುಧವಾರ ಮರಗಳು ಉರುಳಿ, ಮಾಡುಗಳು ಹಾರಿಹೋಗಿ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ. ಕಾಲ್ತೋಡು ಸಿಂಗಾರಿ ಶೆಟ್ಟಿ ಅವರ ಮನೆ ಭಾಗಶಃ ಹಾನಿ, ನಾವುಂದ ಕುಸುಮಾ ಶೆಟ್ಟಿ ಕೊಟ್ಟಿಗೆಭಾಗಶಃ ಹಾನಿ, ನರಸಿಂಹ ಆಚಾರ್ ಅವರ ಕೊಟ್ಟಿಗೆಭಾಗಶಃ ಹಾನಿ, ತಗ್ಗರ್ಸೆ ನಾರಾಯಣ ಪೂಜಾರಿ ಅವರ ಮನೆ ಮತ್ತು ಕೊಟ್ಟಿಗೆಗೆ ರೂ 1 ಲಕ್ಷ, ಮಂಜು ಶೆಟ್ಟಿ ಅವರ ಮನೆಗೆ ರೂ 1 ಲಕ್ಷ, ಹಡವು ಗೌರಿ ಮೊಗವೀರ ಅವರ ಮನೆಗೆ ರೂ 45,000 ಪಡುವರಿ ದೇವಮ್ಮ ಪೂಜಾರಿ ಅವರ ಮನೆಗೆ ರೂ 45,000, ಕಿರಿಮಂಜೇಶ್ವರದ ನಾರಾಯಣ ಅವರ ಮನೆ ಭಾಗಶಃ ಹಾನಿ, ಶಿರೂರು ದಾಸನಾಡಿಯ ಮಂಗಳಾ ಭಂಡಾರಿ ಅವರ ಮನೆಗೆ ರೂ 50,000 ಹಾನಿ ಆಗಿದೆ. ಗೋಳಿಹೊಳೆ ಗ್ರಾಮದ ಸುಳ್ಳಿಗುಡ್ಡೆಮನೆಯ ಅಡಿಕೆ ಮತ್ತು ಬಾಳೆ ತೋಟದ ಕೆಲವು ಮರಗಳು ಉರುಳಿವೆ. ಹಾನಿ ಸಂಭವಿಸಿದ ಸ್ಥಳಗಳಿಗೆ ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಮತ್ತು ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಭೇಟಿನೀಡಿ ಹಾನಿ ಅಂದಾಜಿಸಿದ್ದಾರೆ.
ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಮನೆಗಳ ಮೇಲೆ ಮರಬಿದ್ದು, 3 ಲಕ್ಷಕ್ಕ ನಷ್ಟ ಸಂಭವಿಸಿದೆ. ಕುಂದಾಪುರ ತಾಲೂಕಿನ ಕಾಳವರ ಗ್ರಾಮದ ಭಾಸ್ಕರ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಕೊರ್ಗಿ ಗ್ರಾಮದ ಭುಜಂಗ ಹೆಗ್ಡೆ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಹೊಸೂರು ಗ್ರಾಮದ ಸಾಧು ನಾಯ್ಕ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಹಕ್ಲಾಡಿ ಗ್ರಾಮದ ಬುಡ್ಗುರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಹೆಮ್ಮಾಡಿ ಗ್ರಾಮದ ಜಲಜ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಆಲೂರು ಗ್ರಾಮದ ಗೋಪಾಲ ಪೂಜಾರಿ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಆಲೂರು ಗ್ರಾಮದ ಗೋಪಾಲ ಪೂಜಾರಿ ರವರ ವಾಸ್ತವ್ಯದ ಮನೆ ಭಾಗಶಃ ಹಾನಿ, ಅಸೋಡು ಗ್ರಾಮದ ಸರಸ್ವತಿ ಶೆಡ್ತಿ ರವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
ಹೇರೂರು ಪ್ರವಾಹದಿಂದ ಕಿಂಡಿ ಅಣೆಕಟ್ಟೆಗೆ ಹಾನಿ:
ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೇರೂರಿನ ಯರುಕೋಣೆ ಮಠ ಎಂಬಲ್ಲಿನ ಹಳ್ಳದಲ್ಲಿ ತೇಲಿಬಂದ ಮರದ ಭಾಗಗಳು ಹಳ್ಳದ ಕಿಂಡಿ ಅಣೆಕಟ್ಟೆಯ ಕಿಂಡಿಗಳಲ್ಲಿ ಸಿಲುಕಿಕೊಂಡು ನೀರಿನ ಹರಿವಿಗೆ ತಡೆಯೊಡ್ಡಿದುವು. ಅದರ ಪರಿಣಾಮವಾಗಿ ನೀರು ಉಕ್ಕಿಹರಿದು ಅಣೆಕಟ್ಟಿನ ಒಂದು ತಡೆಗೋಡೆ ಕೊಚ್ಚಿಹೋಯಿತು. ಗಮನಿಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಅಣೆಕಟ್ಟಿನ ನಿರ್ವಹಣೆ ಮಾಡುತ್ತಿರುವ ಕಿರು ನೀರಾವರಿ ಇಲಾಖೆಗೆ ಮಾಹಿತಿ ನೀಡಿದರು. ಬುಧವಾರ ಸ್ಥಳಕ್ಕೆ ಬಂದ ಇಂಜಿನಿಯರ್ ನಾಗಲಿಂಗ ಗುತ್ತಿಗೆದಾರರ ಮೂಲಕ ಕಿಂಡಿಗಳನ್ನು ತಡೆಮುಕ್ತಗೊಳಿಸಿದರು. ಕೊಚ್ಚಿ ಹೋದ ತಡೆಗೋಡೆಯನ್ನು ಆದಷ್ಟು ಶೀಘ್ರ ಮರುನಿರ್ಮಿಸುವ ಭರವಸೆ ನೀಡಿದರು. ಗುತ್ತಿಗೆದಾರ ಗಾಯಾಡಿ ರಘುರಾಮ ಶೆಟ್ಟಿ ಇದ್ದರು.
ಇದನ್ನೂ ಓದಿ:
► ಕರಾವಳಿಯಲ್ಲಿ ಮುಂದಿನ 5 ದಿನ ಭಾರೀ ಗಾಳಿ – ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ – https://kundapraa.com/?p=40081 .