ಕುಂದಾಪುರ: ಸೌರ್ಪಣಿಕಾ ನದಿಯಲ್ಲಿ ನೆರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಡಾಕೆರೆಯ ಕೋಣ್ಕಿ ಎಂಬಲ್ಲಿ ಸೌಪರ್ಣಿಕ ನದಿಯ ತೀರದಲ್ಲಿ ಹಾಗೂ ನದಿಯ ಮಧ್ಯದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ನೆರೆಗೆ ಕೊಚ್ಚಿ ಹೋದ ಪರಿಣಾಮ ಕುಂದಾಪುರ ತಾಲೂಕಿನ ಬೈಂದೂರು ಹಾಗೂ ಶಿರೂರು ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಬೈಂದೂರು 33 ಕೆವಿ ಉಪ ವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಮಾರ್ಗಗಳನ್ನು ಬಡಾಕೆರೆಯ ಕೋಣ್ಕಿ ಎಂಬಲ್ಲಿ ಸೌಪರ್ಣಿಕ ನದಿಯ ತೀರದಲ್ಲಿ ಹಾಗೂ ನದಿಯ ಮಧ್ಯದಲ್ಲಿ ರಚಿಸಲಾಗಿತ್ತು. ಭಾನುವಾರ ಬೆಳಗಿನಿಂದ ಸುರಿದ ಭಾರಿ ಮಳೆಗೆ ಸೌರ್ಪಣಿಕಾ ನದಿಯಲ್ಲಿ ನೆರೆ ಕಾಣಿಸಿಕೊಂಡಿದ್ದು, ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾದ ಪರಿಣಾಮ ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ತೀರದಲ್ಲಿನ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಹೀಗಾಗಿ ಬೈಂದೂರು ಉಪವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದುದರಿಂದ ಬೈಂದೂರು ಹಾಗೂ ಶಿರೂರು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಇನ್ನು ಕೆಲವು ದಿನ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. ನದಿಯಲ್ಲಿ ನೆರೆ ಪ್ರಮಾಣ ಕಡಿಮೆಯಾದರೆ ಅತಿ ಶೀಘ್ರದಲ್ಲಿ ಕಂಬ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ನಾವುಂದ ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹೀಗಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.