ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಮೀನುಗಾರಿಕೆ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗಂಗೊಳ್ಳಿ, ಮರವಂತೆ ಹಾಗೂ ಕೊಡೇರಿ ಮೀನುಗಾರಿಕಾ ಬಂದರಿಗೆ ಶನಿವಾರ ಭೇಟಿ ನೀಡಿದರು.
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕುಸಿದು ಬಿದ್ದ ಜೆಟ್ಟಿಯನ್ನು ಮತ್ತು ಬ್ರೇಕ್ ವಾಟರ್ ತಡೆಗೋಡೆಯನ್ನು ಪರಿಶೀಲಿಸಿದ ಸಚಿವರು, ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಮೀನುಗಾರ ಮುಖಂಡರ ಸಲಹೆ, ಸೂಚನೆ, ಅಭಿಪ್ರಾಯವನ್ನು ಆಲಿಸಿದರು. 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್‌ನ ತಡೆಗೋಡೆ ಕುಸಿಯುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದಷ್ಟು ಶೀಘ್ರ ತಡೆಗೋಡೆ ದುರಸ್ಥಿಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕುಸಿದು ಬಿದ್ದ ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 12 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಾರಂಭಿಸಲು 4 ಕೋಟಿ ರೂ. ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಅಲ್ಲದೆ ನೂತನ ಹರಾಜು ಪ್ರಾಂಗಣ ನಿರ್ಮಾಣಕ್ಕೆ 1.30 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಜೆಟ್ಟಿ ಪುನರ್ ನಿರ್ಮಾಣ ಮತ್ತು ಹರಾಜು ಪ್ರಾಂಗಣ ನಿರ್ಮಾಣದ ನೀಲನಕಾಶೆ ಮತ್ತು ಸವಿವರವನ್ನು ಬಂದರು ವಠಾರದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸಿ ಯಾವುದೇ ಲೋಪದೋಷ ಬಾರದಂತೆ ಕಾಮಗಾರಿ ನಿರ್ವಹಿಸಬೇಕೆಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಳಿವೆ ಪ್ರದೇಶ ಮತ್ತು ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತಲು ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಮರವಂತೆ ಬ್ರೇಕ್ ವಾಟರ್ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ ಮೊತ್ತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮೀನುಗಾರರ ಪರವಾಗಿ ಕೃತಜ್ಞತೆಗಳು. ಎರಡನೇ ಹಂತದ ಕಾಮಗಾರಿಯ ಯೋಜನಾ ವರದಿ ಸಿದ್ಧವಾಗಿ, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕೊಡೇರಿ ಮೀನುಗಾರಿಕಾ ಜೆಟ್ಟಿ ಮತ್ತು ಉಪ್ಪುಂದ ನಾಡದೋಣಿ ತಂಗುದಾಣದ ಕಿರು ಜಟ್ಟಿಗಳ ವಿಸ್ತರಣೆ ಮಾಡಿ ಮೂಲಭೂತ ಸೌಕರ್ಯ, ವಿದ್ಯುತ್ ದೀಪ, ಕೊಂಡಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ 4.5 ಕೋಟಿ ರೂಪಾಯಿ ಪ್ರಸ್ಥಾವನೆ ಹಣಕಾಸು ಇಲಾಖೆಯಲ್ಲಿ ಇದ್ದು, ವಾರಾಂತ್ಯದಲ್ಲಿ ಮಂಜುರಾತಿ ಪಡೆದು ಮೀನುಗಾರರಿಗೆ ಸೌಕರ್ಯ ಒದಗಿಸಲಾಗುವುದು ಎಂದರು.
ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಣೇಶ ಕೆ., ಬಂದರು ಮತ್ತು ಮೀನುಗಾರಿಕೆ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮಂಚೇಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್, ಜ್ಯೂನಿಯರ್ ಇಂಜಿನಿಯರ್ ವಿಜಯ ಶೆಟ್ಟಿ, ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ, ದ.ಕ ಮತ್ತು ಉಡುಪಿ ಮೀನುಗಾರ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಕರಣ್ ಪೂಜಾರಿ, ಬಿಜೆಪಿ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಬಿಜೆಪಿ ಮುಖಂಡರಾದ ಬಿ.ಸದಾನಂದ ಶೆಣೈ, ಉಮಾನಾಥ ದೇವಾಡಿಗ, ರಾಮಪ್ಪ ಖಾರ್ವಿ, ಮಹೇಶ ಪೂಜಾರಿ ಕುಂದಾಪುರ, ಹರೀಶ ಮೇಸ್ತ, ಮೀನುಗಾರ ಮುಖಂಡರಾದ ಮಂಜು ಬಿಲ್ಲವ, ರಮೇಶ ಕುಂದರ್, ವಾಸುದೇವ ಶಿಪಾ, ರಾಜೇಂದ್ರ ಸುವರ್ಣ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಬಿಜೆಪಿ ಮುಖಂಡರು, ಮೀನುಗಾರ ಮುಖಂಡರು, ಮೀನುಗಾರರು ಮತ್ತಿತರರು ಉಪಸ್ಥಿತರಿದ್ದರು.