ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಟ್ಟಿಯಂಗಡಿ ಪಂಚಾಯತ್ ವ್ಯಾಪ್ತಿಯ ಮಲ್ಲಾರಿ ಎಂಬಲ್ಲಿ ತೀರಾ ಅಗತ್ಯವಿರುವ ಬಡ ಕುಟುಂಬಕ್ಕೆ ಸಂಪೂರ್ಣ ನವೀಕರಿಸಿ ವಾಸಕ್ಕೆ ಯೋಗ್ಯವಾಗಿ ನಿರ್ಮಿಸಿದ ಮನೆ ’ಆಸರೆ’ಯನ್ನು ರೋಟರಿ ಕ್ಲಬ್ ಕುಂದಾಪುರ ತನ್ನ ವಜ್ರಮಹೋತ್ಸವ ವರ್ಷದ ಸುಸಂದರ್ಭದಲ್ಲಿ ಕೊಡುಗೆಯಾಗಿ ನೀಡಿ ಅವರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ ಸಾರ್ಥಕತೆಯನ್ನು ಪಡೆದುಕೊಂಡಿದೆ.
ರೋಟರಿ ಕುಂದಾಪುರದ ಈ ಸೇವೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ೨೦೧೯-೨೦ನೇ ಸಾಲಿನಲ್ಲಿ ರೋಟರಿ ಕುಂದಾಪುರ ಅನೇಕ ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ, ಸಸಿ ನೆಡುವಿಕೆ, ಪರಿಸರ ಕಾಳಜಿ, ಆರೋಗ್ಯ ಮಾಹಿತಿ, ಶುದ್ದ ಕುಡಿಯುವ ನೀರಿನ ಘಟಕ, ಇಂಟರ್‌ರ‍್ಯಾಕ್ಟ್ ಉದ್ಘಾಟನೆ, ಅಶಕ್ತರಿಗೆ ಸಹಾಯಧನ ಹೀಗೆ ಅನೇಕ ಸೇವಾಕಾರ್ಯವನ್ನು ಮಾಡಿದೆ. ಹಿಂದಿನ ಸಾಲಿನ ಉತ್ಸಾಹಿ ಅಧ್ಯಕ್ಷರಾದ ಡಾ. ರಾಜರಾಮ್ ಶೆಟ್ಟಿ ಅವರು ಇಡೀ ರಾಷ್ಟ್ರವೇ ಕೊರೋನಾ ಎಂಬ ಮಹಾಮಾರಿಯಿಂದ ತತ್ತರಿಸಿ ಮಲಗಿಕೊಂಡಿದ್ದಾಗ ಹಟ್ಟಿಯಂಗಡಿ ಸಮೀಪದ ಮಲ್ಲಾರಿಯಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯನ್ನು ಕಂಡು ಅವರ ಪರಿಸ್ಥಿತಿಯನ್ನು ಅರಿತು ಮನೆಯನ್ನು ನವೀಕರಣಗೊಳಿಸುವ ಸಂಕಲ್ಪ ತೊಟ್ಟರು. ಅಂದಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿದ್ದ ಡಾ. ನಾಗಭೂಷಣ್‌ರವರು ಬಡತನ ಹಾಸುಹೊಕ್ಕಾಗಿದ್ದ ಮನೆ, ಅದರಲ್ಲಿಯೂ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ನೈಜ ಪರಿಸ್ಥಿತಿಯನ್ನು ವಿವರಿಸಿ ನೋವಿನಲ್ಲಿರುವ ಕುಟುಂಬಕ್ಕೆ ಆಸರೆಯಾಗಿ ನಿಂತು ಸಹಾಯ ಮಾಡಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಕೊರೋನಾ ಭೀತಿ, ಆರ್ಥಿಕ ಹಿಂಜರಿಕೆಯ ಹಿನ್ನಲೆಯಲ್ಲಿಯೂ ಧೃತಿಗೆಡದೇ ಡಾ. ರಾಜರಾಮ್ ಶೆಟ್ಟಿಯವರು ರೋಟರಿ ಕ್ಲಬ್ ಕುಂದಾಪುರದ ಸದಸ್ಯರ ಸಹಕಾರದೊಂದಿಗೆ ಸಂತ್ರಸ್ಥ ಕುಟುಂಬದ ಬದುಕಿನಲ್ಲಿ ಸಂತಸವನ್ನು ಮೂಡಿಸಿದ ಪುಣ್ಯಕಾರ್ಯ ಮಾಡಿದ್ದಾರೆ. ಸೇವೆಯ ಹೆಸರಿನಲ್ಲಿ ಅನಗತ್ಯವಾದ ಚಟುವಟಿಕೆಗಳೇ ಹೆಚ್ಚುತ್ತಿ
ರುವ ಸಂದರ್ಭದಲ್ಲಿ ನೈಜ ಸೇವೆಯಲ್ಲಿ ತೋಡಗಿದ ರಾಜಾರಾಮ ಶೆಟ್ಟಿಯವರ ಕಾರ್ಯ ಪ್ರಶಂಸನೀಯ.
ನವೀಕರಿಸಿದ ಮನೆಯ ಉದ್ಘಾಟನೆಯನ್ನು ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಅವರು ನೆರವೇರಿಸಿ, ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಮನುಕುಲದ ಸೇವೆ ಅಡಿಯಲ್ಲಿ ಸಮಾಜದ ಕಟ್ಟಕಡೆಯ ಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿರುವುದಕ್ಕೆ ಇದೊಂದು ಸಾಕ್ಷಿ ಎಂಬುದಾಗಿ ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಮಹಮ್ಮದ್ ಅಸ್ಪಕ್ ವಹಿಸಿದ್ದು ವೇದಿಕೆಯಲ್ಲಿ ರೋಟರಿ ಕುಂದಾಪುರದ ವಜ್ರಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷರಾದ ಕೆ. ಆರ್. ನಾಯಕ್, ರೋಟರಿ ವಲಯ ೧ರ ನಿಕಟಪೂರ್ವ ಸಹಾಯಕ ಗವರ್ನರ್ ರವಿರಾಜ್ ಶೆಟ್ಟಿ, ರೋಟರಿ ಜಿಲ್ಲಾ ಕಾರ್ಯದರ್ಶಿ ಕೆ. ಕೆ. ಕಾಂಚನ್, ರೋಟರಿ ವಲಯ ಸೇನಾನಿ ಶ್ರೀನಾಥ್ ರಾವ್, ನವೀಕೃತ ಮನೆ ಆಸರೆಯ ರೂವಾರಿ, ರೋಟರಿ ಕ್ಲಬ್ ಕುಂದಾಪುರದ ನಿಕಟಪೂರ್ವ ಅಧ್ಯಕ್ಷರಾದ ಡಾ. ರಾಜಾರಾಮ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಗಣೇಶ ಐತಾಳ್, ಕಾರ್ಯದರ್ಶಿ ಸತೀಶ್ ಕೊತ್ವಾಲ್, ಇನ್ನಿತರರು ಉಪಸ್ಥಿತರಿದ್ದರು.
ಫಲಾನುಭವಿ ಕುಟುಂಬದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವನ್ನು ಆರೋಗ್ಯ ಇಲಾಖೆ ಗುರುತಿಸಿದ್ದು ಇದಕ್ಕೆ ಪೂರಕವಾಗಿ ತುಂಬಾ ಶೋಚನೀಯ ಸ್ಥಿತಿಯಲ್ಲಿರುವ ಮನೆಯನ್ನು ಮಗುವಿನ ಆರೋಗ್ಯ ದೃಷ್ಟಿಯಿಂದ ನವೀಕರಿಸುವ ಬಗ್ಗೆ ಸೇವಾ ಸಂಸ್ಥೆಯಾದ ಕುಂದಾಪುರ ರೋಟರಿ ಕ್ಲಬ್ ಅನ್ನು ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡು ಸಂಪೂರ್ಣ ನವೀಕರಿಸಿ ಮತ್ತು ಕುಟುಂಬಕ್ಕೆ ಆಸರೆಯಾಗಿ ಬಂದು ಮನೆಗೂ ಸಹ ಆಸರೆ ಎಂಬ ಹೆಸರನ್ನಿಟ್ಟು ಸೇವೆಯಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾರೆ. – ಡಾ. ನಾಗಭೂಷಣ್ ಉಡುಪ, ರೋಟರಿ ವಲಯ ೧ ರ ಸಹಾಯಕ ಗವರ್ನರ್ ಹಾಗೂ ಕುಂದಾಪುರ ತಾಲೂಕು ವೈದ್ಯಾಧಿಕಾರಿ
















