ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ) ಕೋಟ ಅವರು 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕನ್ನಡ ನಾಡಿನ ಖ್ಯಾತ ಬರಹಗಾರ, ಪದ್ಮಶ್ರೀ ಪುರಸ್ಕೃತ , ನಾಡೋಜ ಡಾ. ಎಸ್ ಎಲ್ ಭೈರಪ್ಪನವರಿಗೆ ನೀಡಲು ನಿರ್ಧರಿಸಿದ್ದಾರೆ. ಮಾನ್ಯ ಭೈರಪ್ಪನವರು ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಗೆ ನೀಡಿದ್ದಾರೆ. ಈ ಪ್ರಶಸ್ತಿ ಕಾರಂತರ ಜನ್ಮ ದಿನವಾದ ಅಕ್ಟೋಬರ್ 10 ರಂದು ನೀಡಲಾಗುತ್ತದೆ.
ಕಳೆದ ಹದಿನೈದು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಾ ಬಂದಿದ್ದು, ಕಾರಂತ ಆಸಕ್ತಿ ಕ್ಷೇತ್ರವಾದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಎಸ್. ಎಲ್ ಭೈರಪ್ಪನವರ ಗಣನೀಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.
ಈಗಾಗಲೇ ವೀರಪ್ಪ ಮೊಯ್ಲಿ, ವೇಂಕಟಾಚಲ, ಕೆ. ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ್ ಕಾಸರವಳ್ಳಿ, ಜಯಶ್ರೀ, ಮೋಹನ್ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ್ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ.ಎಮ್ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರರವರಿಗೆ ಹುಟ್ಟೂರ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಆನ್ ಲೈನ್ ಸಾಂಸ್ಕೃತಿಕ – ಸಾಹಿತ್ಯಿಕ ಸುಗ್ಗಿ ಆಲ್ಮೋರ – 2020 ನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ – ನೃತ್ಯ ವೈಭವದಂತಹ ಕಾರ್ಯಕ್ರಮವನ್ನು ಕೋವಿಡ್ ಮುಂಜಾಗ್ರತ ಕ್ರಮದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಆಯ್ಕೆ ಸಮಿತಿಯ ಸದಸ್ಯರು ಯು. ಎಸ್ ಶೆಣೈ, ಕಾರಂತ ಪ್ರತಿಷ್ಠಾನ (ರಿ) ಕೋಟ ಟ್ರಸ್ಟಿಸುಬ್ರಾಯ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ. ಎಸ್ ಪೂಜಾರಿ, ಕೋಟ ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.