ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತೀ ಹೆಚ್ಚಿನ ಪಂಚಾಯತ್‌ಗಳ ಜಯ ಸಾಧಿಸಲಿದೆ. ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಚಿತ್ತೂರಿನಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೆಶಿಸಿ ಮಾತನಾಡಿದರು.
ವಂಡ್ಸೆ ಸ್ವಾವಲಂಬನಾ ಕೇಂದ್ರ ವಿಚಾರ ಪ್ರಸ್ತಾವಿಸಿದ ಅವರು, ಸರ್ಕಾರಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮತಿಯಿಲ್ಲದೇ ಪಂಚಾಯತ್ ಅಧಿಕಾರ ಅಧಿಕಾರ ನಿರ್ವಹಣೆ ಮಾಡುವಂತಿಲ್ಲ. ಖಾಸಗಿಯಾಗಿ ನಾಲ್ಕಾರು ಜನ ಹುಡುಗಿಯರು ಹೊಲಿಗೆ ತರಬೇತಿ ಮಾಡುತ್ತಿದ್ದರು. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಲಾಗಿದೆ. ಮಹಿಳೆಯರನ್ನು ಬೀದಿ ಪಾಲು ಮಾಡಿದ್ದಾರೆ ಎನ್ನುವ ಆರೋಪಗಳಿಗೆ ಹುರುಳಿಲ್ಲ. ನಾನು ಬೈಂದೂರು ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವುದನ್ನು ಜನ ಗುರುತಿಸಿದ್ದಾರೆ ಎಂದರು.
ಬಿಜೆಪಿ ವಿಭಾಗೀಯ ಸಂಚಾಲಕ ಉದಯ ಕುಮಾರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಉಪಸ್ಥಿತರಿದ್ದರು. ಬೈಂದೂರು ಮಂಡಲದ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಿಯದರ್ಶಿನಿ ಸ್ವಾಗತಿಸಿದರು. ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು.










