ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನಿವಾಸಿ ಭಾರತೀಯ ಉದ್ಯಮಿ, ಶಿರೂರು ಮೂಲದ ಮಣೆಗಾರ್ ಮೀರಾನ್ ಸಾಹೇಬ್ ಅವರು ಸಾಮಾಜಿಕ – ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಳೆದ 40 ವರ್ಷಗಳಿಂದ ಗಲ್ಪ್ ರಾಷ್ಟ್ರಗಳಲ್ಲಿ ಕನ್ನಡದ ನಾಡು ನುಡಿಯ ಸೇವೆ ಜೊತೆಗೆ ಶಿಕ್ಷಣ, ಸಾಮಾಜಿಕ, ಸಾಂಸ್ಕ್ರತಿಕ ಸೇರಿದಂತೆ ಹೊರನಾಡಿನಲ್ಲಿ ಪ್ರತಿ ವರ್ಷ ಕನ್ನಡಿಗರ ಸಂಘಟನೆಗೆ ಮತ್ತು ಕನ್ನಡದ ಅಭಿವೃದ್ದಿಗಾಗಿ ನಾನಾ ಸಂಘ ಸಂಸ್ಥೆಗಳ ಮೂಲಕ ಅನುಪಮ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಬೆಂಗಳೂರಿನಲ್ಲಿ ಸಂಘ ಸಂಸ್ಥೆಯ ಸಹಕಾರದೊಂದಿಗೆ ಸ್ಲಮ್ ಏರಿಯಾದಲ್ಲಿ ದುಶ್ಚಟಗಳಿಗೆ ಮಾರು ಹೋಗಿರಿರುವ ನೂರಾರು ಯುವಕರಿಗೆ ಸ್ವ ಉದ್ಯೋಗ ಕಲ್ಪಿಸಿ ಸ್ವಾವಲಂಬನೆಯ ಬದುಕು ಕಟ್ಟಿ ಕೊಟ್ಟಿದ್ದಾರೆ. ಶಿರೂರು ಉತ್ಸವದ ಮೂಲಕ ಶಿರೂರಿನ ಅಭಿವೃದ್ದಿಗೆ ಶ್ರಮಿಸಿದ ಇವರು ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾಗಿದ್ದಾರೆ. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ವಿದೇಶದಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಜನಪರ ಕಾಳಜಿಯ ಕಾರ್ಯಕ್ರಮ ಸಂಘಟಿಸುವ ಜೊತೆಗೆ ನೂರಾರು ಬಡ ಕುಟುಂಬಗಳಿಗೆ ನೆರವಾಗಿದ್ದಾರೆ.
ಸ್ವಚ್ಚ ಶಿರೂರು ಪರಿಕಲ್ಪನೆಯಲ್ಲಿ ಶಿರೂರು ಗ್ರಾಮ ಪಂಚಾಯತ್‌ಗೆ ಕಸ ಸಾಗಿಸುವ ವಾಹನ, ಆರೋಗ್ಯ ರಕ್ಷಣೆ ಯೋಜನೆಯಲ್ಲಿ ಶಿರೂರು ಸರಕಾರಿ ಆಸ್ಪತ್ರೆ ಕಟ್ಟಡ, ಸುಸಜ್ಜಿತ ಅಂಬ್ಯುಲೆನ್ಸ್ ಕೊಡುಗೆ, ಆಸರೆ ಯೋಜನೆಯಲ್ಲಿ 2019ರಲ್ಲಿ ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಸುಮಾರು ಹತ್ತಕ್ಕೂ ಅಧಿಕ ಕುಟುಂಬಗಳಿಗೆ ಸಂಪೂರ್ಣ ಮನೆ ರಿಪೇರಿ, ನೆರವು ಯೋಜನೆಯಡಿ ಇಪ್ಪತ್ತೈದು ಕುಟುಂಬಗಳಿಗೆ ಉಚಿತ ಕೋಳಿ ಸಾಕಣೆ ವ್ಯವಸ್ಥೆ, ಸೋಲಾರ್ ದೀಪ ಕೊಡುಗೆ ನೀಡಿದ್ದಾರೆ.
ಶಿರೂರು ಕಳುಹಿತ್ಲು ಶಾಲಾ ಕಟ್ಟಡ ನಿರ್ಮಾಣ, ಕೆಸರಕೋಡಿ ಶಾಲೆ, ಮಾದರಿ ಶಾಲೆ, ಪೇಟೆ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಪೀಠೋಪಕರಣ, ಕಂಪ್ಯೂಟರ್, ಕಲಿಕಾ ಸಾಮಾಗ್ರಿ ಕೊಡುಗೆ ನೀಡಿದ್ದಾರೆ. ಎಮ್ ಎಮ್ ಹೌಸ್ ಹೆಸರಿನಲ್ಲಿ ಕೊಡುಗೆ ನೀಡುವ ಇವರು ಶಿರೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಗ್ರೀನ್ ವ್ಯಾಲಿ ಆಂಗ್ಲಮಾದ್ಯಮ ಶಾಲೆಯ ನಿರ್ಮಾಣದ ಕನಸು ಕಂಡಿರುವ ಜೊತೆಗೆ ಹತ್ತು ಎಕರೆ ಜಾಗವನ್ನು ಶಾಲೆಗೆ ಕೊಡುಗೆ ನೀಡಿದ್ದಾರೆ.
ಕೊರೋನಾ ವಾರಿಯರ‍್ಸ್‌ಗೆ ಪ್ರೋತ್ಸಾಹ: ಕೊರೊನಾ ಸಮಯದಲ್ಲಿ ಮನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಹತ್ತು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಿಟ್ ವಿತರಣೆ, ಬಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಿಯೊಸ್ಕ್ ಯಂತ್ರ ಕೊಡುಗೆ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಮುಂತಾದ ಕೊಡುಗೆ ನೀಡಿದ್ದಾರೆ. ಅತಿವ್ರಷ್ಟಿ ಸಮಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲದೆ ಕೊರೊನಾ ಸಮಯದಲ್ಲಿ ದುಬಯಲ್ಲಿ ಸಂಕಷ್ಟದಲ್ಲಿದ್ದ ಹಲವು ಕನ್ನಡಿಗರಿಗೆ ವಿಶೇಷ ವಿಮಾನದ ಮೂಲಕ ಹುಟ್ಟೂರಿಗೆ ಕಳುಹಿಸಿದ್ದರು.
ನಾನು ಆತ್ಮ ಸಂತೃಪ್ತಿಗಾಗಿ ಸಮಾಜ ಸೇವೆ ಮಾಡುತ್ತಿದ್ದು. ಯಾವುದೇ ಪ್ರಶಸ್ತಿ ಪುರಸ್ಕಾರದ ಆಸೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿಲ್ಲ. ನನ್ನ ಕಿಂಚಿತ್ ಸೇವೆ ಸರಕಾರ ಗುರುತಿಸಿರುವುದು ಸಂತಸವಾಗಿದೆ – ಮಣೆಗಾರ್ ಮೀರಾನ್ ಸಾಹೇಬ್ ಶಿರೂರು