ಬೈಂದೂರು: ಕಳೆದ ವರ್ಷ ಅಸಹಜ ಸಾವನ್ನಪ್ಪಿದ ಶಿರೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್‌ನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಶಿರೂರು ಪದವಿ ಪೂರ್ವ ಕಾಲೇಜಿನಲ್ಲಿ ವಿತರಿಸಿದರು.
ಈ ಸಂಧರ್ಭ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆದ ಇಂತಹ ಘಟನೆಗಳು ಪಾಲಕರಲ್ಲಿ ಸಹಜವಾಗಿ ಆತಂಕ ಉಂಟು ಮಾಡುತ್ತದೆ. ಗ್ರಾಮೀಣ ಭಾಗದ ವ್ಯವಸ್ಥೆಗಳ ಸುಧಾರಣೆಗೆ ಹಾಗೂ ವಿದ್ಯಾರ್ಥಿಗಳು ಮತ್ತು ಮಹಿಳೆಯರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗಿದೆ. ಪ್ರವಾಹ, ಬಿರುಗಾಳಿ ಹಾಗೂ ನರೆ ಹಾವಳಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೂ ಆದ್ಯತೆ ಮೇಲೆ ಪರಿಹಾರ ನೀಡಲು ತಿಳಿಸಲಾಗಿದೆ ಎಂದರು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ರತ್ನಾ ಕೊಠಾರಿ ಸಾವಿನ ಕುರಿತು ವೈದ್ಯಕೀಯ ವರದಿ ಹಾಗೂ ಇತರ ದಾಖಲೆಗಳು ಜಿಲ್ಲಾ ಹಂತದಲ್ಲಿ ಪರಿಶೀಲನೆಯಿಂದ ವಿಳಂಬವಾಗಿತ್ತು. ಬೆಳಗಾಂ ಅಧಿವೇಶನದಲ್ಲಿ ಗೃಹಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ರೂ. ಅನುದಾನ ಪಡೆಯಲಾಗಿದೆ. ನೆರೆ ಹಾವಳಿ ಹಾಗೂ ಇತರ ಅವಘಡಗಳಿಂದ ನಷ್ಟವಾಗಿದ್ದವರಿಗೆ ಸೂಕ್ತ ಪರಿಹಾರ ಜಿಲ್ಲಾಡಳಿತದಿಂದ ನೀಡಲಾಗುತ್ತಿದೆ ಎಂದರು.
ಅಕ್ಷತಾ ದೇವಾಡಿಗ ಕುಟುಂಬಕ್ಕೆ 5ಲಕ್ಷ ಪರಿಹಾರ
ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ನ್ನು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ವಿತರಿಸಲಾಯಿತು. ಈ ಸಂಧರ್ಭ ಕುಂದಾಪುರ ತಹಶೀಲ್ದಾರ ಗಾಯತ್ರಿ ನಾಯಕ್, ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ, ಜಿ.ಪಂ. ಸದಸ್ಯ ಗೌರಿ ದೇವಾಡಿಗ, ತಾ.ಪಂ. ಸದಸ್ಯ ರಾಜು ಪೂಜಾರಿ, ಶಿರೂರು ಗ್ರಾ.ಪಂ. ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ ಮೊಗೇರ, ಕೊಠಾರಿ ಸಂಘದ ಅಧ್ಯಕ್ಷ ಗೋಪಾಲ ಕೊಠಾರಿ, ಪ್ರಾಂಶುಪಾಲ ಎಂ.ಪಿ. ನಾಯ್ಕ, ಉಪಪ್ರಾಂಶುಪಾಲ ಸುರೇಶ ನಾಯ್ಕ, ಎಸ್.ಡಿ.ಎಂ.ಸಿ. ಸದಸ್ಯ ಗೋವಿಂದ ಬಿಲ್ಲವ, ಗ್ರಾ.ಪಂ. ಸದಸ್ಯರಾದ ಮಂಜುನಾಥ ಪೂಜಾರಿ, ರಾಮ ಮೇಸ್ತ, ರಘರಾಮ ಕೆ.ಪೂಜಾರಿ, ಶಖೀಲ್ ಮೊದಲಾದವರು ಉಪಸ್ಥಿತರಿದ್ದರು.