ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕೊಡೇರಿ ಮೀನುಗಾರಿಕಾ ಕಿರು ಬಂದರು ಕಾಮಗಾರಿಯಲ್ಲಿ ಲೋಪ ಉಂಟಾಗಿದ್ದರಿಂದ ಕಿರಿಮಂಜೇಶ್ವರ ಗ್ರಾಮದ ಜನರು ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮೀನುಗಾರರು ಬಂದರ್‌ನಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಶ್ರೀರಾಮ ಸೇವಾ ಸಮಿತಿ ಮತ್ತು ಮಹಾಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆ ಯಾವುದೇ ಮೂಲಸೌಲಭ್ಯಗಳನ್ನು ಕಲ್ಪಿಸದೆ ಬಂದರಿನ ಪಶ್ಚಿಮ ಭಾಗದಲ್ಲಿ ತಾತ್ಕಾಲಿಕ ಮೀನು ಹರಾಜಿಗೆ ಅನುಮತಿ ನೀಡಿದೆ. ದಂಡೆಗಳ ಬದಿಗಳ ರಿವೆಟ್‌ಮೆಂಟ್ ಮಾಡದೆ 2.5 ಮೀಟರ್ ಡ್ರೆಜಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಪೂರ್ವ ಭಾಗದಲ್ಲಿ ವಾಸಿಸುವ ಕೊಡೇರಿ ಭಾಗದ ಜನರ ಆಸ್ತಿಗೆ ನಷ್ಟ ಉಂಟಾಗಲಿದೆ. ಕುಡಿವ ನೀರಿನ ಬಾವಿಗಳಲ್ಲಿ ಉಪ್ಪು ನೀರು ಬರುವ ಸಾಧ್ಯತೆ ಇದೆ. ಪಶ್ಚಿಮದ ದಂಡೆ ಕುಸಿದಿದೆ. ತಕ್ಷಣವೇ ಕ್ರಮ ಕೈಗೊಳ್ಳದೇ ಇದ್ದರೆ ಇನ್ನಷ್ಟು ಕುಸಿಯಲಿದೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆಗ್ರಹಿಸಿದರು.
ಬಂದರು ಕಾಮಗಾರಿ ಆರಂಭವಾದಾಗಲೇ ಈ ಭಾಗದ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮೀನು ಹರಾಜು ಪ್ರಾಂಗಣವನ್ನು ಕಿರಿದಾದ ಪಶ್ಚಿಮ ದಂಡೆಯಲ್ಲಿ ನಿರ್ಮಿಸಿರುವುದು, ಅದನ್ನು ತಲುಪಲು ರಸ್ತೆ ನಿರ್ಮಾಣ ಮಾಡದೇ ಇರುವುದರನ್ನು ವಿರೋಧಿಸಿದರು.
ಆನಂದ ಪೂಜಾರಿ, ಶೇಖರ, ಸುಬ್ರಹ್ಮಣ್ಯ, ಅಂಬರೀಶ ಕುಮಾರ, ಪ್ರಕಾಶ, ದೇವರಾಜ್, ಲಕ್ಷ್ಮಣ, ಟಿ. ಸುಕ್ರ ಇದ್ದರು.