ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಶ್ರೇಷ್ಠ ಸಹಕಾರಿಗಳಲ್ಲಿ ಓರ್ವರೆಂದು ಪರಿಗಣಿಸಲ್ಪಟ್ಟಿರುವ ಎಸ್. ರಾಜು ಪೂಜಾರಿ ಅವರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹುದ್ದೆಗೇರಿ ಯಶಸ್ವಿಯಾಗಿ ಇಪ್ಪತ್ತೈದನೇ ಸಂವತ್ಸರಕ್ಕೆ ಕಾಲಿರಿಸಿದ್ದಾರೆ. ಗತಿಸಿದ ವರ್ಷಗಳೊಂದಿಗೆ ಹೊಸ ಅಧ್ಯಾಯವನ್ನು ಬರೆಯುತ್ತಾ, ಸಂಘಕ್ಕೆ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂಬ ಹಿರಿಮೆ ತಂದುಕೊಟ್ಟು ತಾನೊಬ್ಬ ಸಮರ್ಥ ಸಹಕಾರಿ ಎಂಬುದನ್ನೂ ಸಾಕ್ಷೀಕರಿಸಿದ ಹೆಗ್ಗಳಿಗೆ ಅವರದ್ದು.
1976ರಲ್ಲಿ ಮರವಂತೆ, ಬಡಾಕೆರೆ, ನಾವುಂದ ಮತ್ತು ಹೇರೂರು ಗ್ರಾಮಗಳ ಪ್ರತ್ಯೇಕ ಸಹಕಾರಿ ಸಂಘಗಳು ಒಗ್ಗೂಡಿ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂದಿತು. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಪುಟ್ಟ ಕಟ್ಟಡದಲ್ಲಿ ಅದರ ಕಾರ್ಯಾಲಯ; ಒಬ್ಬಿಬ್ಬರು ನೌಕರರು; ಹದಗೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಸೀಮಿತ ವ್ಯವಹಾರ. ಕನಿಷ್ಠ ಸಾಲ ನೀಡಲೂ ಹಿಂದೆಮುಂದೆ ನೋಡಬೇಕಾದ ಅನಿವಾರ್ಯತೆ. ಪ್ರತಿವರ್ಷವೂ ನಷ್ಟ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆ 1995ರ ನವೆಂಬರ್ 10ರಂದು ಎಸ್. ರಾಜು ಪೂಜಾರಿ ಸಂಘದ ಅಧ್ಯಕ್ಷ ಪದ ಸ್ವೀಕರಿಸಿದ್ದರು. ಸಂಘವು ಅವನತಿಯಲ್ಲಿದ್ದ ಸ್ಥಿತಿಯನ್ನೇ ಚಿಮ್ಮು ಹಲಗೆಯಾಗಿ ಪರಿವರ್ತಿಸಿಕೊಂಡ ರಾಜು ಪೂಜಾರಿ ಅವರು ಸಂಘವನ್ನು ಬಹುಬೇಗ ಏರುಗತಿಯ ಓಟಕ್ಕೆ ಸಜ್ಜುಗೊಳಿಸಿದರು. ಅದನ್ನು ಹಂತಹಂತವಾಗಿ ಬೆಳೆಸಿದರು. ಇಂದು ಅವರು ಸಂಘದ ಅಧ್ಯಕ್ಷ ಪದದ ರಜತ ಪರ್ವದಲ್ಲಿದ್ದಾರೆ. ಅದರೊಂದಿಗೆ ಅಸಾಧ್ಯವೆನಿಸಿದ್ದ ಕಾರ್ಯವನ್ನು ಸಾಧ್ಯವಾಗಿಸಿದ ಸಂತಸ, ಸಂತೃಪ್ತಿ ಗಳಿಸಿದ್ದಾರೆ.
ಸಮರ್ಥ ನಾಯಕನ ಜತೆ ಜನ ನಿಲ್ಲುತ್ತಾರೆ ಎನ್ನುವುದಕ್ಕೆ ಪೂಜಾರಿ ಅವರು ಸಾಗಿದ ದಾರಿಯಲ್ಲಿ ಪಡೆದ ಸಂಸ್ಥೆಯ ನಿರ್ದೇಶಕರ ಮತ್ತು ಸಿಬ್ಬಂದಿಯ ಬೆಂಬಲ, ಸಹಕಾರ ಸಾಕ್ಷಿಯಾದುವು. ಬಹು ಶೀಘ್ರದಲ್ಲಿ ಎಲ್ಲರೂ ಬದಲಾವಣೆಗೆ ಒಗ್ಗಿಕೊಂಡರು. ಅವರೊಂದಿಗೆ ಹೆಜ್ಜೆ ಹಾಕಿದರು. ಎಲ್ಲದರ ಫಲವಾಗಿ ಅನತಿ ಕಾಲದಲ್ಲೇ ಸಂಘ ಚಿಗುರೊಡೆದು, ಹೆಮ್ಮರವಾಗಿ ಬೆಳೆಯತೊಡಗಿತು.
ರಾಜು ಪೂಜಾರಿ ಅಧ್ಯಕ್ಷತೆಯ ಆರಂಭಿಕ ಹಂತದಲ್ಲಿ ಅದರ ಸದಸ್ಯ ಸಂಖ್ಯೆ 1156, ಪಾಲು ಬಂಡವಾಳ ರೂ 5,61,125, ಠೇವಣಿ ರೂ 28,52,318, ಕ್ಷೇಮನಿಧಿ ಸೇರಿದಂತೆ ಒಟ್ಟು ನಿಧಿ ರೂ 45,238 ಹೊರಬಾಕಿ ಸಾಲ ರೂ.27,84,363 ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್ ಸಾಲ ರೂ.14,89,134 ಇದ್ದುವು. ಆದರೆ ಅದರ ಪ್ರಸಕ್ತ ಸದಸ್ಯ ಸಂಖ್ಯೆ 4,359, ಪಾಲು ಬಂಡವಾಳ ರೂ. 1,70,51,560, ಠೇವಣಿ ಮೊತ್ತ ರೂ 35,24,72,320, ನಿಧಿ ರೂ.3,28,71,323, ಹೊರಬಾಕಿ ಸಾಲ ರೂ.33,03,87,001 ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್ ಸಾಲ ರೂ.7,41,48,885. 1994-95ರಲ್ಲಿ ರೂ. 2 ಕೋಟಿ ಇದ್ದ ವಾರ್ಷಿಕ ವಹಿವಾಟು ಇಂದು ರೂ. 187 ಕೋಟಿಗೂ ಅಧಿಕ. ಅಂದು ರೂ. 54 ಲಕ್ಷದಷ್ಟು ಇದ್ದ ದುಡಿಯುವ ಬಂಡವಾಳ ಇಂದು ರೂ. 55ಕೋಟಿಯಾಗಿದೆ. ಇವರ ಅಧ್ಯಕ್ಷ ಅವಧಿಯ ಪೂರ್ವದಲ್ಲಿ ನಷ್ಟದಲ್ಲಿದ್ದ ಸಂಸ್ಥೆಯು ಈಗ ವಾರ್ಷಿಕ ರೂ. 1 ಕೋಟಿಗೂ ಅಧಿಕ ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘ ಅವರ 25 ವರ್ಷಗಳ ಅಧ್ಯಕ್ಷ ಅವಧಿಯಲ್ಲಿ ಸಾಧಿಸಿದ ಪ್ರಗತಿಗೆ ಇವುಗಳು ಮಾನದಂಡಗಳಾಗಿವೆ. ಸಂಘ ತಾನು ಅನುಭವಿಸಿದ ಏಳು ಬೀಳುಗಳನ್ನು ಹಿಂದಕ್ಕೆ ತಳ್ಳಿ, ಸವಾಲುಗಳನ್ನು ಮೆಟ್ಟಿ, ದೃಢನೆಲೆಯ ಮೇಲೆ ನಿಂತಿದೆ. ತನ್ನ ವ್ಯಾಪ್ತಿಯ ರೈತರ, ಕೃಷಿಕರ, ವಾಣಿಜ್ಯೋದ್ಯಮಿಗಳ ಆರ್ಥಿಕ ಬೆನ್ನೆಲುಬಾಗಿ ಪರಿವರ್ತಿತವಾಗಿದೆ. ಸದಸ್ಯರ, ಠೇವಣಿದಾರರ, ಗ್ರಾಹಕರ ವಿಶ್ವಾಸ ಗಳಿಸಿದೆ.
ನಾವುಂದದ ಹೆದ್ದಾರಿ ಅಂಚಿನಲ್ಲಿದ್ದ ಹಳೆಯ ಪ್ರಧಾನ ಕಚೇರಿ ಕಟ್ಟಡದ ಬದಲಿಗೆ ಸಹಕಾರ ಸನ್ನಿಧಿ ಹೆಸರಿನ ನೂತನ ಸುಸಜ್ಜಿತ ಕಟ್ಟಡ ಹೊಂದುವ ಮೂಲಕ ಅಂತಹ ಕಟ್ಟಡ ಪಡೆದ ಪರಿಸರದ ಮೊದಲ ಸಹಕಾರಿ ಎಂಬ ಹೆಗ್ಗಳಿಕೆ ಅದರದು. ಆ ಬಳಿಕ ಹೇರೂರು ಶಾಖೆಗೆ ಹೊಸ ನಿವೇಶವನ್ನು ಒದಗಿಸಿ ಅಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಡಾಕೆರೆಯಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಭಿಸಿ ನಿವೇಶನವನ್ನು ಒದಗಿಸಿ ಅಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಮರವಂತೆ ಶಾಖೆಗೂ ನಿವೇಶನ ಒದಗಿಸಿ ಇದೀಗ ಕಟ್ಟಡ ನಿರ್ಮಾಣವಾಗುತ್ತಿದೆ. ಅಧ್ಯಕ್ಷ ರಾಜು ಪೂಜಾರಿಯವರ ಈ ಹೆಜ್ಜೆ ಸಂಘದ ಎಲ್ಲ ಕಾರ್ಯಾಲಯಗಳಿಗೆ ಆಕರ್ಷಕ ಕಟ್ಟಡ ಒದಗಿಸುವುದರ ಜತೆಗೆ ಅದರ ಸ್ಥಿರ ಆಸ್ತಿ ಮೌಲ್ಯ ವೃದ್ಧಿಯಾಗಿ ಅದಕ್ಕೆ ಆರ್ಥಿಕ ಶಕ್ತಿ ತುಂಬಿದೆ; ಸದಸ್ಯರು ಮತ್ತು ಗ್ರಾಹಕರಲ್ಲಿ ಸಂಘದ ಬಗ್ಗೆ ಹೊಸ ಭರವಸೆ ಮೂಡಿಸಿದೆ.
ಸಂಘವು ತನ್ನ ಸದಸ್ಯರಿಗೆ ಸಲ್ಲಿಸಬೇಕಾದ ಎಲ್ಲ ವಿಧದ ಸೇವೆಗಳನ್ನು ಅದೀಗ ಒದಗಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೂ ಅದು ತನ್ನ ಸೇವೆಯನ್ನು ವಿಸ್ತರಿಸಿದೆ. ಪ್ರತಿವರ್ಷ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಪಾವತಿಸುತ್ತಿದೆ. ಆರೋಗ್ಯ ಸಂಬಂಧಿ ಸಂಕಷ್ಟದಲ್ಲಿರುವರಿಗೆ ನೆರವಾಗುತ್ತಿದೆ. ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದೆ. ಕೊರೊನಾ ಹೆಮ್ಮಾರಿ ವ್ಯಾಪಿಸಿದಾಗ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದುದಲ್ಲದೆ ರೋಗ ನಿರೋಧಕ ಶಕ್ತಿವರ್ಧಕ ಔಷಧಿ ವಿತರಿಸಿದೆ. ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಆಹಾರದ ಕಿಟ್, ಆಶಾ ಕಾರ್ಯಕರ್ತರಿಗೆ ನಗದು ನೆರವು ಕೊಟ್ಟಿದೆ. ಸರಕಾರದ ಕೋವಿಡ್-19ರ ಪರಿಹಾರ ನಿಧಿಗೆ ರೂ 25,000 ಸಹಾಯಧನ ಪಾವತಿಸಿದೆ. ಸಂಘದ ನೌಕರರಿಗೆ ಆರೋಗ್ಯ ವಿಮೆ ಮಾಡಿಸಿದೆ. ಕೊರೊನಾ ಪರೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾಹನ ಸೌಲಭ್ಯ ಒದಗಿಸಿದೆ. ಇವೆಲ್ಲದರ ಕಾರಣದಿಂದ ಎಸ್. ರಾಜು ಪೂಜಾರಿ ನಾಯಕತ್ವದಲ್ಲಿ ಇನ್ನಷ್ಟು ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ಗಿಟ್ಟಿಸಿಕೊಂಡಿದೆ. ಅದರ ಈ ಹಿರಿಮೆಗೆ ರಾಜು ಪೂಜಾರಿ ಅವರ ಅಧ್ಯಕ್ಷ ಪದದ ರಜತ ಪರ್ವಕ್ಕೆ ನಿಕಟ ನಂಟು ಇದೆ.
ವಿಭಿನ್ನ ಕ್ಷೇತ್ರಗಳ ಸಾಧನೆಯ ಸರದಾರ ಎಸ್. ರಾಜು ಪೂಜಾರಿ:
ಒಬ್ಬನ ವ್ಯಕ್ತಿತ್ವ ರೂಪುಗೊಳ್ಳಲು ಅನುವಂಶೀಯತೆ ಮತ್ತು ಪರಿಸರದ ಪ್ರಭಾವ ಒಟ್ಟಾಗಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬ ಮಾತಿಗೆ ಎಸ್. ರಾಜು ಪೂಜಾರಿ ಅವರೊಂದು ಉದಾಹರಣೆ. ಅವರ ತಂದೆ ಮರವಂತೆಯ ದಿ| ಎಸ್. ರಾಮ ಪೂಜಾರಿ ಸಮಾಜ ಸೇವೆಯೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪರಿಷತ್ತಿನ ಸದಸ್ಯ ಹುದ್ದೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದವರು. ಸಮುದಾಯದ ಎಲ್ಲ ವರ್ಗ, ಮತ, ಜಾತಿಗಳೊಂದಿಗೆ ಬೆರೆತು ಬದುಕಿದವರು; ವ್ಯವಹರಿಸಿದವರು. ರಾಜು ಪೂಜಾರಿಯವರಲ್ಲಿ ನಾಯಕತ್ವ ಗುಣ ಅಭಿಜಾತವಾಗಿ ಹೊಮ್ಮಲು ಇದು ಕಾರಣ. ಅದರೊಂದಿಗೆ ಅವರು ಗಳಿಸಿದ ಪದವಿ ಶಿಕ್ಷಣ, ಎಳವೆಯಲ್ಲೇ ದೊರೆತ ಜಿಲ್ಲೆಯ ಮುತ್ಸದ್ದಿ ರಾಜಕಾರಿಣಿ, ಆದರ್ಶ ಸಹಕಾರಿ, ಶಾಸಕ ಜಿ. ಎಸ್. ಆಚಾರ್ ಅವರ ಆಶ್ರಯ, ರಾಷ್ಟ್ರಮಟ್ಟಕ್ಕೆ ಬೆಳೆದು ನಿಂತಿರುವ ಸಹಕಾರಿ ಧುರೀಣ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರ ಮಾರ್ಗದರ್ಶನ ರಾಜು ಪೂಜಾರಿಯವರನ್ನು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಹಕಾರಿ ರಂಗಗಳ ಸಮರ್ಥ ಧುರೀಣರನ್ನಾಗಿಸಿವೆ.
ಮರವಂತೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಸಾರ್ವಜನಿಕ ಜೀವನ ಆರಂಭಿಸಿದ ರಾಜು ಪೂಜಾರಿಯವರು, ಉಡುಪಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. ಹೀಗೆ ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ಸಂಸದೀಯ ಮತ್ತು ಆಡಳಿತಾತ್ಮಕ ಪ್ರತಿಭೆ ಮೆರೆದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ದಾಖಲೆಯ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಅವರು ಒಂದೊಮ್ಮೆ ನಷ್ಟದಲ್ಲಿ ನಲುಗುತ್ತಿದ್ದ ಅದನ್ನು ಲಾಭದತ್ತ ಮುನ್ನಡೆಸಿ, ಅದರ ಪ್ರಧಾನ ಕಾರ್ಯಾಲಯ ಮತ್ತು ಶಾಖೆಗಳಿಗೆ ಸುಂದರ, ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ.
ಮರವಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿ ಕ್ಷೀರೋತ್ಪನ್ನ ಅಭಿವೃದ್ಧಿ ಕ್ಷೇತ್ರಕ್ಕೆ ಕಾಲಿರಿಸಿದ ಪೂಜಾರಿಯವರು, ಯಡ್ತರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಜತೆಗೆ ತಂದೆ ರಾಮ ಪೂಜಾರಿ ಅವರ ನೆನಪಿನಲ್ಲಿ ಬೈಂದೂರಿನಲ್ಲಿ ಸ್ಥಾಪಿಸಿ, ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸಂಸ್ಥೆಯನ್ನು ಕೇವಲ ಹತ್ತು ವರ್ಷಗಳಲ್ಲಿ ಐದು ಶಾಖೆಗಳಿಗೆ ವಿಸ್ತರಿಸಿ ಸಹಕಾರಿ ಸಾಧನೆಯ ಹೊಸ ಅಧ್ಯಾಯ ಬರೆದಿದ್ದಾರೆ. ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿ ಕಾರ್ಯವೆಸಗುತ್ತ ಅದರ ಬೆಳವಣಿಗೆಯಲ್ಲಿಯೂ ಕೈಜೋಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸದಸ್ಯರಾಗಿ ದುಡಿಯುತ್ತಿದ್ದಾರೆ. ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ (ಸ್ಕ್ಯಾಡ್ಸ್) ನಿರ್ದೇಶಕ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ ಸಂಘದ ನಿರ್ದೇಶಕ ಹುದ್ದೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಬಾಗಲಕೋಟೆಯಲ್ಲಿ ನಡೆದಿದ್ದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ, ಕಳೆದ ವರ್ಷ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವೆಲ್ಲ ಸಾಧನೆ, ಪ್ರಶಂಸೆ, ಪ್ರಶಸ್ತಿಗಳಿಂದ ಇನ್
ನಷ್ಟು ಉತ್ಸಾಹ ಗಳಿಸಿರುವ ಎಸ್. ರಾಜು ಪೂಜಾರಿ ಅವರು ಜಿಲ್ಲೆಯ ಸಾಧಕ ಸಹಕಾರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.