ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರ್ನಾಟಕ ಸರಕಾರ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕೋವಿಡ್-19 ಪರೀಕ್ಷಾ ಶಿಬಿರ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖಗೊಳ್ಳುತ್ತಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಕರೋನಾ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಕರೋನಾ ಪಾಸಿಟಿವ್ ಬಂದರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕೆಂಬ ಸೂಚನೆ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ನಿರ್ಭಿತಿಯಿಂದ ಕೋವಿಡ್ ತಪಾಸಣೆ ನಡೆಸಬೇಕು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೋವಿಡ್ ಪರೀಕ್ಷಾ ಶಿಬಿರ ಆಯೋಜಿಸಲಾಗಿದ್ದು, ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಹೇಳಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ರೋಟರಿ ಕಾರ್ಯದರ್ಶಿ ಎಂ. ನಾಗೇಂದ್ರ ಪೈ, ರೋಟರಿ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಬಿ. ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.










