ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಿಜಾರ್‌ನ ಶೋಭಾವನ ಕ್ಯಾಂಪಸ್‌ನ ‘ಆಳ್ವಾಸ್ ಪುನರ್ಜನ್ಮ’ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ’ಕುಟುಂಬ ಸಮ್ಮಿಲನ ಸಭೆ’ ಹಾಗೂ ದೀಪಾವಳಿ ಆಚರಣೆ ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಆಯುರ್ವೇದ ಮನೋರೋಗ ತಜ್ಞ ಡಾ. ರವಿ ಪ್ರಸಾದ ಹೆಗ್ಡೆ ಮಾತನಾಡಿ, ಹಲವು ಸಂಧರ್ಭದಲ್ಲಿ ಕುಡಿತ ಮನುಷ್ಯ ತಾನಾಗಿಯೆ ಕಲಿಯುವುದಲ್ಲ. ಇನ್ನೊಬ್ಬರ ಒತ್ತಾಯದಿಂದ ಕುಡಿಯುತ್ತಾನೆ. ನಂತರ ದಿನಗಳಲ್ಲಿ ಕುಡಿತ ಚಟವಾಗಿ ಮಾರ್ಪಟ್ಟು, ದುಡಿತ ಕಡಿಮೆಯಾಗಿ ಕುಡಿತ ಅಧಿಕವಾದಾಗ ಜೀವನ ನಡೆಸುವುದು ಕಷ್ಟವಾಗಿ ಬಿಡುತ್ತದೆ ಎಂದು ಹೇಳಿದರು.
ಆಳ್ವಾಸ್ ಪದವಿ ಸಮಾಜಕಾರ‍್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಮಾತನಾಡಿ, ವ್ಯಸನಗಳಿಗೆ ಒಳಗಾಗಿದ್ದವರು, ವ್ಯಸನ ಮುಕ್ತರಾಗಬೇಕೆಂಬ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಚಿಕ್ಕ ವಿಷಯವಲ್ಲ. ಕುಡಿತದಿಂದ ಸಮಾಜದಲ್ಲಿ ಗೌರವ ಹಾಳಾಗುವುದರೊಂದಿಗೆ ಜನರು ಕೀಳಾಗಿ ನೋಡುತ್ತಾರೆ. ಕುಡಿತದಿಂದ ಪಡೆದು ಕೊಳ್ಳುವುದು ಎನೂ ಇಲ್ಲಾ, ಎಲ್ಲವೂ ಕಳೆದು ಕೊಳ್ಳುವುದೇ ಎಂದು ತಿಳಿಸಿದರು.
ಕಾರ‍್ಯಕ್ರಮದಲ್ಲಿ ಕೊನೆಯಲ್ಲಿ ದೀಪ ಹಚ್ಚುವುದರ ಮೂಲಕ ಅಜ್ಞಾನ, ದುಷ್ಚಟವೆಲ್ಲ ಕಳೆದು, ಸುಜ್ಞಾನ ಮೂಡಲಿ ಎಂದು ಪ್ರಾರ್ಥಿಸಲಾಯಿತು. ಕಾರ‍್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‌ನ ನಿರ್ದೇಶಕ ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಹಬೋಜನ ಏರ್ಪಡಿಸಲಾಗಿತ್ತು. ಕಾರ‍್ಯಕ್ರಮವನ್ನು ಅಭಿಷೇಕ್ ಆರ್ ನಿರೂಪಿಸಿದರು.