ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರು ತಮ್ಮ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕ ಸ್ಥಾನಕ್ಕೆ ಕುಂದಾಪುರ ಮೂಲದ ಅಮೆರಿಕನ್ ಮಾಲಾ ಅಡಿಗ ಅವರನ್ನು ಶುಕ್ರವಾರ ನೇಮಕ ಮಾಡಿದ್ದು, ಮಾಲಾ ಅವರ ಕುಟುಂಬಿಕರಲ್ಲಿ ಸಂಭ್ರಮ ಮನೆಮಾಡಿದೆ.
ಅಮೆರಿಕದಲ್ಲೇ ಹುಟ್ಟಿ ಬೆಳೆದ ಮಾಲಾ ಅವರು ಕುಂದಾಪುರದ ಕಕ್ಕುಂಜೆಯ ರಮೇಶ್ ಅಡಿಗ ಹಾಗೂ ಜಯಾ ಅಡಿಗ ದಂಪತಿಯ ಹಿರಿಯ ಪುತ್ರಿ. ಅವರು ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ತಂದೆ ರಮೇಶ್ ಅಡಿಗರು ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿದ ಕೂಡಲೇ ಅಮೆರಿಕಕ್ಕೆ ತೆರಳಿ ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾಗಿದ್ದಾರೆ.
ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ಮಾಲಾ ನೇಮಕವಾದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ದಲ್ಲಿರುವ ಅವರ ಸೋದರತ್ತೆ ನಿರ್ಮಲಾ ಉಪಾಧ್ಯಾಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಸಂದರ್ಭ ಸಂಭ್ರಮ ಹಂಚಿಕೊಂಡ ನಿರ್ಮಲಾ ‘ಮಾಲಾ ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲಾದರೂ ಭಾರತದ ಮೂಲ ಮರೆತಿಲ್ಲ’ ಎಂದರು.
ತುಂಬಾ ಸೌಮ್ಯ ಹಾಗೂ ಕುತೂಹಲ ಸ್ವಭಾವದ ಮಾಲಾ ಕೆಲವು ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದರು. 2019ರಲ್ಲಿ ಪತಿ ಚಾರ್ಲ್ಸ್, ಪುತ್ರಿ ಆಶಾ ಹಾಗೂ ತಂದೆ ರಮೇಶ್ ಅಡಿಗರ ಜತೆಗೆ ಬೆಂಗಳೂರಿಗೆ ಬಂದಿದ್ದರು ಎಂದು ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು.
ಸೋದರತ್ತೆ ಮಗಳು ಸುಜಾತಾ ಮಾತನಾಡಿ, ‘ಮಾಲಾಗೆ ಸಾಂಪ್ರದಾಯಿಕ ಬ್ರಾಹ್ಮಣ ಶೈಲಿಯ ಖಾದ್ಯಗಳು ಎಂದರೆ ಅಚ್ಚುಮೆಚ್ಚು. ಏಳು ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಇಲ್ಲಿನ ಕಡಲ ತೀರ, ಕುಂದೇಶ್ವರ ದೇವಸ್ಥಾನ, ಬಬ್ಬರ್ಯನ ಕಟ್ಟೆಯಲ್ಲಿರುವ ಪೂರ್ವಜರ ಮನೆಗೆ ಭೇಟಿಕೊಟ್ಟಿದ್ದರು’ ಎಂದರು.