ಕುಂದಾಪ್ರ ಡಾಟ್ ಕಾಂ ಸುದ್ದಿ
ಶಂಕರನಾರಾಯಣ: ಇಲ್ಲಿಗೆ ಸಮೀಪದ ಕುಳ್ಳುಂಜೆ ಗ್ರಾಮದ ಕೋವಿನಗುಡ್ಡೆ ಎಂಬಲ್ಲಿ ಚಿಕ್ಕ ಗುಡಿಸಿಲಿನಲ್ಲಿ ದಯಾನೀಯ ಬದುಕು ಸಾಗಿಸುತ್ತಿದ್ದ ಸಾಂತು ಅಜ್ಜಿ ಎಂಬುವವರಿಗೆ ನೆಟ್ಟಿಗರು, ದಾನಿಗಳು, ಸರ್ಕಾರದ ನೆರವಿನಿಂದ ತಾ.ಪಂ ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಂದರ ಹಾಗೂ ಸುಸಜ್ಜಿತವಾದ ಮನೆ ಸಿದ್ಧಗೊಂಡು ಸೋಮವಾರ ಗೃಹ ಪ್ರವೇಶ ನೆರವೇರಿದೆ.
ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮನೆಯೊಳಕ್ಕೆ ದೀಪ ಬೆಳಗಿ, ವಯೋವೃದ್ದೆ ಸಾಂತಜ್ಜಿಯನ್ನು ಗೌರವಿಸಿದರು. ಬಳಿಕ ಅವರು ಮಾತನಾಡಿ, ಇದು ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವ ಮಾನವೀಯ ಕಾರ್ಯ. ಉಮೇಶ ಶೆಟ್ಟರು ಅವರ ಸ್ನೇಹಿತರ ಪರಿಶ್ರಮವನ್ನು ಈ ಕುಟುಂಬ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.
ಮನೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ತಾ.ಪಂ. ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಮಾತನಾಡಿ, ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಂದಾಗ ಸಾಂತಜ್ಜಿ ಟಾರ್ಪಲ್ ಸೂರಿನ ಮನೆ ನೋಡಿದೇವು. ಸಾಂತಜ್ಜಿ ಅವರ ಮಗಳು, ಮೊಮ್ಮಗಳು ಬಿಟ್ಟು ಮತ್ಯಾರೂ ಇಲ್ಲ. ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹಾಗಾಗಿ ಅಜ್ಜಿಗೆ ಒಂದ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದಾಗ ಎರಡು ಲಕ್ಷದ ಐವತ್ತನಾಲ್ಕು ಸಾವಿರ ಅಜ್ಜಿಯ ಖಾತೆಗೆ ಬಂತು. ಶಂಕರನಾರಾಯಣ ಗ್ರಾಮ ಪಂಚಾಯತ್‍ನಿಂದ ಅಂದಿನ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಅವರು ಮನೆ ಮಂಜೂರಾತಿ ಮಾಡಿಸಿದ್ದು ಅದರಿಂದ 90 ಸಾವಿರ ಹಣ ಬಂದಿದೆ. ಕ್ಷೇತ್ರದ ಶಾಸಕರು ಸಹಕಾರ ನೀಡಿದ್ದಾರೆ. ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಂಡು ಮನೆ ಗೃಹ ಪ್ರವೇಶ ಆಗಿದೆ. ಅತಿಥಿಗಳು ಬರುವಾಗಲೂ ಗೃಹಬಳಕೆಗೆ ಅಗತ್ಯವಾದ ವಸ್ತುಗಳನ್ನು ತಗೆದುಕೊಂಡು ಬಂದು ಸಾಂತಜ್ಜಿ ಕುಟುಂಬಕ್ಕೆ ನೆರವಾಗಿದ್ದಾರೆ.
ಈ ಸಂದರ್ಭ ಜಿ. ಪಂ. ಸದಸ್ಯ ರೋಹಿತ್ ಕುಮಾರ ಶೆಟ್ಟಿ, ಬಿಜೆಪಿ ಮುಖಂಡರಾದ ಡಾ|ಸಚ್ಚಿದಾನಂದ ವೈದ್ಯ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ:
► ಮೃತ ಕೂಲಿಯಾಳು ಕುಟುಂಬಕ್ಕೆ ತಾಪಂ ಸದಸ್ಯನಿಂದ ಸೂರು ನಿರ್ಮಾಣ – https://kundapraa.com/?p=42728..