ಕುಂದಾಪುರ: ಇತ್ತೀಚೆಗೆ ಗೋಪಾಡಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಅವರ ಮನೆಗೆ ತೆರಳಿದ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ ಸಹಾಯಧನವನ್ನು ಮನೆಯವರಿಗೆ ಹಸ್ತಾಂತರಿಸಿದರು.
ಇಂದಿರಾ ಅವರ ಪುತ್ರ ಅನ್ವಿತ್ ಹೆಸರಿನಲ್ಲಿ 2 ಲಕ್ಷ ರೂ. ಚೆಕ್ ನೀಡಿದ್ದಲ್ಲದೇ ಆಕೆಯ ನೂತನ ಮನೆ ನಿರ್ಮಾಣಕ್ಕೆ 25,000 ರೂ. ನಗದು ನೀಡಿದರು.
ಇದೇ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಇನ್ನೋರ್ವ ಯುವಕನಿಗೆ 10,000 ರೂ. ನೀಡಿದರಲ್ಲದೇ ಮಣಿಪಾಲ ಆಸ್ಪತ್ರೆಯ ವೆಚ್ಚ ಭರಿಸುವಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಕೆಎಂಸಿಯನ್ನು ಸಂಪರ್ಕಿಸುವುದಾಗಿ ಹೇಳಿದರು. ಗೋಪಾಡಿ ಬೀಜಾಡಿ ಗ್ರಾಮಸ್ಥರು ಡಾ| ಜಿ. ಶಂಕರ್ ಅವರ ಮಾನವೀಯತೆಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಕೋಟೇಶ್ವರ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಮಹಿಳಾ ಸಂಘಟನೆ ಅಧ್ಯಕ್ಷೆ ಹೇಮಾ ತೆಕ್ಕಟ್ಟೆ, ಜಿ.ಪಂ. ಸದಸ್ಯ ಗಣಪತಿ ಶ್ರೀಯಾನ್, ಚಿಕ್ಕು ಅಮ್ಮ ದೇವಸ್ಥಾನದ ಅಧ್ಯಕ್ಷ ಎಲ್.ವಿ. ನಾಯಕ್, ಬೀಜಾಡಿ ಗ್ರಾ.ಪಂ. ಸದಸ್ಯ ವೆಂಕಟೇಶ್ ಕುಮಾರ್ ಬೀಜಾಡಿ, ನಾರಾಯಣ ಪೈಂಟರ್, ರಾಮ ನಾಯ್ಕ ಬೀಜಾಡಿ, ಉಡುಪಿಯ ಗಣೇಶ್ ಸಾಲ್ಯಾನ್, ವಿನಯ ಕರ್ಕೇರ, ಚೇತನಾ ಸಾಲ್ಯಾನ್, ರಾಕೇಶ್ ಸಾಲ್ಯಾನ್, ನೀಲಾಧರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.