ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಡಚಾದ್ರಿ ಬೆಟ್ಟದ ಚಿತ್ರಮೂಲ ಗಣಪತಿ ಗುಹೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ
ಆ ಭಾಗದಲ್ಲಿ ತಡೆಬೇಲಿ ಅಳವಡಿಸಿ ಭಕ್ತರ ಪ್ರವೇಶವನ್ನು ತಡೆಹಿಡಿಯಲಾಗಿದೆ ಅರಣ್ಯ ಇಲಾಖೆ ಕೈಗೊಂಡ ಈ ಕ್ರಮವು ಚರ್ಚೆಗೆ ಗ್ರಾಸವಾಗಿದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೊಡಚಾದ್ರಿ, ವನ್ಯ ಜೀವಿಗಳು ಸಹಿತ ಔಷದೀಯ ಗಿಡಮೂಲಿಕೆಗಳ ತಾಣವಾಗಿದೆ. ಅರಣ್ಯ ಇಲಾಖೆಗೆ ಬಂದ ದೂರಿನಂತೆ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗಿದೆ ಹಾಗಾಗಿ ಭಕ್ತರಿಗೆ ಇಷ್ಟಾರ್ಥ ಪೂರೈಕೆಗೆ ತೊಡಕಾಗಿದೆ ಎಂಬ ಭಾವನೆ ಮೂಡಿಬಂದಿದೆ. ಸರ್ವಜ್ಞ ಪೀಠ, ಚಿತ್ರಮೂಲ ಗಣಪತಿ ಗುಹೆ ಆಧ್ಯಾತ್ಮಿಕ ಚಿಂತಕರು ಸಹಿತ ಸಾಧು ಸಂತರಿಗೆ ಧ್ಯಾನ ಕೇಂದ್ರವಾಗಿದೆ.
ಈ ದಿಸೆಯಲ್ಲಿ ಕೊಡಚಾದ್ರಿ ಪರಿಸರ ಸಂರಕ್ಷಣ ಟ್ರಸ್ಟ್ಟ್‌ನ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿಯವರು ಧಾರ್ಮಿಕ ಭಾವನೆಯ ಮೇಲೆ ಧಕ್ಕೆ ಉಂಟುಮಾಡಿರುವ ಇಲಾಖೆ ಕ್ರಮವನ್ನು ಖಂಡಿಸಿದ್ದು ಗೇಟ್ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖಾ ಅಧಿಕಾರಿಗಳು, ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವ ಕೊಡಚಾದ್ರಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಸಹಿತ ಮದ್ಯ ಬಾಟಲಿ ದಿನೇ ದಿನೇ ಹೆಚ್ಚುತ್ತಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಡಿ.ಸಿ.ಎಪ್ ಅವರ ಆದೇಶದಂತೆ ತಡೆಬೇಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.