ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಒಂದೇ ನೋಟಕ್ಕೆ ಮನತುಂಬಿದ ನಗು. ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿ ಗೊಂದು ಚಾಟಿ. ಜನಸಾಮಾನ್ಯರಿಗೆ ನಗುವಿನ ಚಟಾಕಿ. ವಾಸ್ತವದ ಅನಾವರಣ. ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ. ಇಂತಹ ಕಾರ್ಟೂನಿಷ್ಠರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ 6 ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಈ ಭಾರಿ ಡಿ.12 ಹಾಗೂ 13ರಂದು ನಡೆಯಲಿದೆ.
ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯರ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು, ಈ ಭಾರಿ ಆನ್ಲೈನ್ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಡಿ. 12ರಂದು ಮುಂಬೈನಿಂದ ಕೊರೋನಾ ಯೋಧ, ನಟ ಸೋನು ಸೂದ್ ಕಾರ್ಟೂನು ಹಬ್ಬ ಹಾಗೂ ‘ಗೋ ಕರೋನಾ ಗೋ’ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ವಿವಿಧ ಗಣ್ಯರು ಉದ್ಘಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 12:30ರಿಂದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದ ಸಂಪಾದಕೀಯ ವ್ಯಂಗ್ಯಚಿತ್ರ ಕಾರ್ಯಗಾರ ನಡೆಯಲಿದೆ.
ಡಿ.13ರಂದು ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮ ಜರುಗಲಿದ್ದು ಹಿರಿಯ ವ್ಯಂಗ್ಯಚಿತ್ರಗಾರರೊಂದಿಗೆ ಸಂವಾದ ನಡೆಯಲಿದೆ. ಅಂದು ಮಧ್ಯಾಹ್ನ 2ಕ್ಕೆ ಮಾಯಾ ಕಾಮತ್ ಕಾರ್ಟೂನು ಸ್ವರ್ಧೆಯ ಅಂತಿಮ ಹಂತ ನಡೆಯಲಿದ್ದು, ಸಂಜೆ 5ಕ್ಕೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಕೊರೋನಾ ಯೋಧರಿಗೆ ಸನ್ಮಾನ ನಡೆಯಲಿದೆ.
ಹಬ್ಬದಲ್ಲಿ ಕಾರ್ಟೂನು ಪ್ರದರ್ಶನ, ಸ್ಕೂಲ್ ಟೂನ್ ಚಾಂಪಿಯನ್ಶಿಪ್ ಕಾರ್ಟೂನು ಸ್ವರ್ಧೆ, ಲೈವ್ ಕ್ಯಾರಿಕೇಚರಿಂಗ್, ಎಡಿಟೂನ್ಸ್, ಮಾಸ್ಟರ್ ಸ್ಟ್ರೋಕ್, ನಿತ್ಕ ಕಾಮಿಡಿ ಕೂತ್ಕ ನಗಾಡಿ, ಸೆಲ್ಫಿ ಕಾರ್ನರ್, ಹೀಗೆ ನಾಲ್ಕು ದಿನವೂ ಕಾರ್ಟೂನು ಪ್ರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ರಂಜನೆ ಹಾಗೂ ಅರಿವಿಗಾಗಿ ಇದರ ಜೊತೆ ಜೊತೆಗೆ ಕಾರ್ಟೂನಿನ ಬಗೆಗೆ ಒಲವು ಮೂಡಿಸುವುದಕ್ಕಾಗಿ ಕಾರ್ಟೂನು ಕುಂದಾಪ್ರ ತಂಡ ಸಿದ್ದವಾಗಿದೆ.
ಸತೀಶ್ ಆಚಾರ್ಯರರ ಕನಸು:
ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ವೃತ್ತಿ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ್ಯ ಅವರು, ಇಂದು ತನ್ನ ಕಲೆಯನ್ನು ಜಗತ್ತಿಗೆ ಪಸರಿಸುವ ಹಾಗೂ ಮುಂದಿನ ಪೀಳಿಗೆಗೂ ಕಾರ್ಟೂನು ಕಲೆಯ ಕಸುವು ಒದಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್ಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. ಒಂದು ಹಂತದ ಯಶಸನ್ನು ತಲುಪಿದ ಬಳಿಕ ತನ್ನ ಹುಟ್ಟೂರಿಗೆ ಮರಳಿ ರೇಸ್ ಮುಂದುವರಿಸಿದ ಸತೀಶ್ ಅವರು, ತಾನು ಸಾಗುವ ಮಾರ್ಗದಲ್ಲಿ ತನ್ನವರನ್ನೂ ಕರೆದೊಯ್ಯುತ್ತಿದ್ದಾರೆ. ಕಾರ್ಟೂನಿಷ್ಠರನ್ನು ಒಟ್ಟಾಗಿಸಿ ಸತತವಾಗಿ ಕಾರ್ಟೂನು ಹಬ್ಬ ಆಯೋಜಿಸಿ ಕುಂದಾಪುರ ಮಣ್ಣಿನಲ್ಲಿ ವ್ಯಂಗ್ಯಚಿತ್ರದ ಅಭಿರುಚಿಯನ್ನು ಹಾಗೆಯೇ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಕನಸುಗಳನ್ನು ಸಕಾರಗೊಳಿಸುವಲ್ಲಿ ಯಶವನ್ನೂ ಕಂಡಿದ್ದಾರೆ.
ಕಾರ್ಟೂನು ಹಬ್ಬದ ನೇರಪ್ರಸಾರವನ್ನು ಸತೀಶ್ ಆಚಾರ್ಯ ಅವರ ಫೇಸ್ಬುಕ್ ಪೇಜ್ ಹಾಗೂ ಕುಂದಾಪ್ರ ಡಾಟ್ ಕಾಂ ಫೇಸ್ಬುಕ್ ಪೇಜ್ ಮೂಲಕ ನೋಡಬಹುದಾಗಿದೆ.















