ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗೆ ಮತ್ತು ಉಪನ್ಯಾಸಕರುಗಳಿಗೆ ‘ತಂಡದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿಕೆ’ ಎಂಬ ವಿಷಯದ ಕುರಿತು ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು.
ಪಾನ್ ಇಂಡಿಯಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಬಿ. ಆರ್. ಕೆ. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಕಲಿಕೆಯಲ್ಲಿ ನಿರಂತರತೆ, ಹೊಸತನ, ಹುರಿದುಂಬಿಸುವ ಮನೋಭಾವ, ಅಗಾಧವಾದ ಜ್ಞಾನ, ಮಾತನಾಡುವ ಕೌಶಲ್ಯವನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ಸಮರ್ಥ ಶಿಕ್ಷಕನಾಗಬಹುದು ಹಾಗೆಯೇ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಹಿಂಜರಿಕೆ ಸಲ್ಲದು ಎಂದು ತಿಳಿಸಿದರು.
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ್ ಮಾತನಾಡಿ ಶಿಕ್ಷಕರಾದವರು ತಮ್ಮಲ್ಲಿರುವ ಅಪಾರವಾದ ಜ್ಞಾನದಿಂದ, ಶಿಷ್ಯವಾತ್ಸಲ್ಯದಿಂದ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಬೇಕೇ ವಿನಹ ವಿದ್ಯಾರ್ಥಿಗಳನ್ನು ದಂಡಿಸುವುದರಿಂದ ಅಲ್ಲ, ಶಿಕ್ಷಕ ದಂಡಾಧಿಕಾರಿಯಾಗಬಾರದು ದೀಪದಾರಿಯಾಗಬೇಕು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ್ರೀ ಕೆ. ರಾಧಾಕೃಷ್ಣ ಶೆಣೈಯವರು ವಹಿಸಿದರು. ಶ್ರೀ ವೆಂಕಟರಮಣ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣ ಅಡಿಗ, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಡಿಸೋಜಾ ಮತ್ತು ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕ ಅಶೋಕ್ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸುಪ್ರೀತಾ ಶೆಟ್ಟಿ ನಿರೂಪಿಸಿದರು.