ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಶಾರದಾ ಕಾಲೇಜು, ಬಸ್ರೂರು ಐಕ್ಯೂಎಸಿ ಮತ್ತು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಭಾಗ ಮತ್ತು ಸಮುದಾಯ ಕುಂದಾಪುರ ಇದರ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವೆಬಿನಾರ್ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಟ್ರಸ್ಟಿ ಸದಸ್ಯರಾದ ಉದ್ಯಮಿ ಗಣೇಶ ಶೆಟ್ಟಿ ಮೊಳಹಳ್ಳಿ, ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇಂದು ಹಮ್ಮಿಕೊಂಡಿರುವ ಜಿಡಿಪಿ ಮತ್ತು ಉದ್ಯೋಗ ಎಂಬ ವೆಬಿನಾರ್ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ವಿಶ್ವವಿದ್ಯಾನಿಲಯದ ಹಂಪಿ ಇದರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿ ಮಾತನಾಡಿ, ಜಿಡಿಪಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಹಾಗೂ ಆರ್ಥಿಕ ಗಾತ್ರವನ್ನು ಸಂಕೇತಿಸುತ್ತಿದ್ದು, ಜನರ ಖರೀದಿ ಸಾಮರ್ಥ್ಯ, ದೇಶೀಯ ಹಾಗೂ ವಿದೇಶಿಹೂಡಿಕೆ, ಉದ್ಯೋಗ ಸೃಷ್ಟಿ, ಸೇವಾ ವಲಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರ್ಕಾರ ಉತ್ಪಾದನಾ ವಲಯ ಚೇತರಿಕೆಗೆ, ಕೃಷಿ ಕ್ಷೇತ್ರಕ್ಕೆ ಬೆಂಬಲ, ಉದ್ಯೋಗ ಸೃಷ್ಟಿಯಾಗಬಲ್ಲ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎಂ ದಿನೇಶ ಹೆಗ್ಡೆ ಹಾಗೂ ಸಮುದಾಯ ಕುಂದಾಪುರ ಕಾರ್ಯದರ್ಶಿ ಸದಾನಂದ ಬೈಂದೂರು, ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕರಾದ ಪುರುಷೋತ್ತಮ ಬಲ್ಯಾಯ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ಶೆಟ್ಟಿ ಪರಿಚಯಿಸಿದರು. ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಆಚಾರ್ಯ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿ ಅನಿತಾ ವಿ.ಎಂ ತಾಂತ್ರಿಕ ಸಹಕಾರ ನೀಡಿದರು.