ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷ ಕಲೆಯ ಸಂಪ್ರದಾಯ ಬಿಟ್ಟು, ಯಕ್ಷಗಾನದ ಮೂಲಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಕಲಾವಿದ ಹಾಗೂ ಪ್ರೇಕ್ಷಕರ ಕೈಯಲ್ಲಿದೆ ಎಂದು ಸಾಲಿಗ್ರಾಮ ಯಕ್ಷಗಾನ ಮೇಳದ ಸಂಚಾಲಕ ಎಚ್.ಶ್ರೀಧರ್ ಹಂದೆ ಹೇಳಿದರು.
ಕೋಟ ಕದ್ರಿಕಟ್ಟು ರಂಗ ಚಾವಡಿಯಲ್ಲಿ ಕೋಟ ಯಕ್ಷಾತರಂಗ ವ್ಯವಸಾಯಿ ಯಕ್ಷ ತಂಡದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಹಕಾರದಲ್ಲಿ ನಡೆದ ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದರ ಶಾಲೆ, ಇನ್ನೊಂದು ವಿದ್ಯೆ ಕಲಿವ ಶಾಲೆ. ಇವೆರಡೂ ಜೀವನದ ಮೌಲ್ಯಗಳನ್ನು ತಿಳಿಸುವ ಶಾಲೆ. ಹಿಂದೆ ವಿದ್ಯೆ ಕಡಿಮೆ ಸಿಕ್ಕರೂ ಯಕ್ಷಗಾನದ ಮೂಲಕ ತಮ್ಮ ಬೆಳವಣಿಗೆ ಕಂಡಿದ್ದಾರೆ.ಆದರೆ, ಇಂದು ಅದು ಕಾಣಸಿಗುತ್ತಿಲ್ಲ. ಯಕ್ಷಕಲೆಯ ಸಂಪ್ರದಾಯ ಬದ್ಧ ಅಳಿದು ಹಾಕುವ ಸ್ಥಿತಿಗೆ ತಂದೊಡ್ಡಿದ್ದಾರೆ. ಕಲಾವಿದ ತಪ್ಪು ಮಾಡಿದಾಗ ಅದನ್ನು ತಿದ್ದುವ ಕಾರ್ಯವಾಗಬೇಕು ಎಂದರು.
ಯಕ್ಷಗಾನದ ಸಂಪ್ರದಾಯ ಬಿಟ್ಟು ಹೊಸ ರೂಪದ ಕಡೆ ಮುಖ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಯುವ ಮನಸ್ಸುಗಳಿಗೆ ಸಂಪ್ರದಾಯದಿಂದ ಕೂಡಿದ ಯಕ್ಷ ಕಲೆಯ ಅಭಿರುಚಿ ಬೆಳೆಸಬೇಕಿದೆ. ಇದರೊಂದಿಗೆ ಮಕ್ಕಳಿಗೆ ಭಾಷಾ ಅರಿವು ಹೆಚ್ಚುತ್ತದೆ. ಆಗ ಮಾತ್ರ ಯಕ್ಷಗಾನ ಉಳಿಯುತ್ತದೆ. ಕಲಾರಾಧನೆ ನಿರಂತರಗೊಳ್ಳುತ್ತದೆ ಎಂದು ಹೇಳಿದರು.
ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ, ಯಕ್ಷಾಂತರಂಗದ ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ, ಯಕ್ಷ ಮಹಿಳಾ ಬಳಗದ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಇದ್ದರು.
ಯಕ್ಷ ಮಹಿಳಾ ಬಳಗದ ಸುಪ್ರಿತಾ ಪುರಾಣಿಕ್ ಸ್ವಾಗತಿಸಿದರು. ವಸಂತಿ ಪೂಜಾರಿ ವಂದಿಸಿದರು. ಬಳಗದ ಸಂಚಾಲಕಿ ಸುಧಾ ಮಣೂರು ನಿರೂಪಿಸಿದರು. ನಂತರ ‘ದುರ ಕೇಸರಿ’ ಯಕ್ಷಗಾನ ಪ್ರಸಂಗ ಪ್ರದರ್ಶಿನ ಮಾಡಲಾಯಿತು.