ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶದಿಂದ ಆಯೋಜಿಸಲ್ಪಟ್ಟ ‘ಓರಿಯೆಂಟೇಷನ್ ಕಾರ್ಯಕ್ರಮ’ ನಡೆಯಿತು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಗುಣಮಟ್ಟದ ಉನ್ನತ ಶಿಕ್ಷಣ ನಮ್ಮೆಲ್ಲರ ಆದ್ಯತೆಯಾಗಿ, ಶೈಕ್ಷಣಿಕ ಜಗತ್ತಿನ ಮುಂಚೂಣಿಯಲ್ಲಿ ಭಾರತ ನಿಲ್ಲುವಂತಾಗಬೇಕು. ಒಂದು ದೇಶದ ನಿಜವಾದ ಅಭಿವೃದ್ದಿಯನ್ನು ಆ ದೇಶದ ಉನ್ನತ ಶಿಕ್ಷಣದ ಗುಣಮಟ್ಟದ ಸೂಚ್ಯಂಕದ ಮೇಲೆ ನಿರ್ಧರಿಸಲಾಗುತ್ತದೆ. ಈ ಕಾಲಕ್ಕನುಗುಣವಾದ ಮೌಲ್ಯಯುತ ಶಿಕ್ಷಣವನ್ನು ಪಡೆದಾಗ ಮಾತ್ರ ನಮ್ಮ ಬೆಳವಣಿಗೆಯೊಂದಿಗೆ ದೇಶದ ಬೆಳವಣಿಗೆಗೆ ನಾವು ಕೊಡುಗೆ ನೀಡಲು ಸಾಧ್ಯ. ಉನ್ನತ ಶಿಕ್ಷಣ ಪಡೆದ ಪ್ರತಿಯೊಬ್ಬರೂ, ತನ್ನ ಜ್ಞಾನದ ನೆಲೆಯಲ್ಲಿ ಈ ದೇಶಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ನಾವು ಈ ನೆಲದಿಂದ ಪಾಂಡಿತ್ಯವನ್ನು ಪಡೆಯುವವರು ಮಾತ್ರ ಆಗದೆ, ಜ್ಞಾನವನ್ನು ಇನ್ನೊಬ್ಬರಿಗೆ ನೀಡುವವರಾಗಬೇಕು. ಈ ಹಿನ್ನಲೆಯಲ್ಲಿ ನಮ್ಮ ಉನ್ನತ ಶಿಕ್ಷಣದ ತರಗತಿಯ ಬೋಧನೆಗಳು ರಚನಾತ್ಮಕತೆಯಿಂದ ಕೂಡಿರಬೇಕು ಎಂದರು. ವಿದ್ಯಾರ್ಥಿಗಳು ಜ್ಞಾನದೊಂದಿಗೆ ತಮ್ಮ ಬೆಳವಣಿಗೆಯನ್ನು ಕಾಣುತ್ತಾ, ಸದಾ ಸಕಾರಾತ್ಮಕ ದೃಷ್ಠಿಕೊನದೊಂದಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವವರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಹೊಸ ವಿಷಯವನ್ನು ಕಲಿಯುವಲ್ಲಿ ವಿದ್ಯಾರ್ಥಿಗಳ ಸಹಭಾಗವಹಿಸುವಿಕೆ ಅತೀ ಮುಖ್ಯ ಹಾಗೂ ಪ್ರತಿಯೊಬ್ಬರೂ ತಮ್ಮ ಬಗೆಗಿರುವ ಕೀಳರಿಮೆಯಿಂದ ಹೊರ ಬಂದಾಗ ಮಾತ್ರ ನಮ್ಮಲ್ಲಿ ಸಾದಿಸುವ ಛಲ ಮೂಡುತ್ತದೆ. ಯಾವುದೇ ಕ್ಷೇತದಲ್ಲಿ ಸಫಲತೆಯನ್ನು ಕಾಣಲು, ಸ್ಪಷ್ಟವಾದ ಗುರಿ, ಸರಿಯಾದ ಮಾರ್ಗದರ್ಶನ, ಹಾಗೂ ನಮ್ಮ ಪಾಲ್ಗೊಳ್ಳುವಿಕೆ ಮುಖ್ಯವೆನಿಸುತ್ತದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ನಿರ್ಮಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾರ್ಯಕ್ರಮಗಳ ವಿಡಿಯೋವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಕೋಶಗಳ ಮುಖ್ಯಸ್ಥರುಗಳಾದ ಡಾ ಮೂಕಾಂಬಿಕ, ಶಾಜಿಯಾ ಕಾನುಮ್, ಡಾ ಅಶೋಕ ಡಿಸೋಜಾ, ಅಶೋಕ ಕೆ.ಜಿ, ಸುಧೀಂದ್ರ ಶಾಂತಿ, ಡಾ ಸುಕೇಶ, ಹಾಗೂ ಕೃಷ್ಣಮೂರ್ತಿ ಪರಿಚಯಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ನ ಶೆಟ್ಟಿ, ಐಕ್ಯೂಎಸಿ ಸಂಯೋಜಕ ಡಾ. ರಾಜೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅರ್ಪಿತಾ ಸ್ವಾಗತಿಸಿ, ಪ್ರದ್ವಿನಿ ವಂದಿಸಿ, ಶಿವಾನಿ ಶೆಟ್ಟಿ ನಿರೂಪಿಸಿದರು.