ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಳ್ವಾಸ್‌ನ ಎನ್‌ಸಿಸಿ ಘಟಕದ ಸಹಯೋಗದೊಂದಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ರಿಜಿನಲ್ ರೆಸ್ಪಾನ್ಸ್ ಸೆಂಟರ್, ಬೆಂಗಳೂರು ಇವರ ವತಿಯಿಂದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಗಾರ ನಡೆಯಿತು.
ಮುಖ್ಯ ಅತಿಥಿಯಾಗಿ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜನರು ಎನ್ಸಿಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು ಹಾಗೂ ನೇರನುಡಿಯನ್ನು ಕಲಿಯಲು ಸಾಧ್ಯ ಎಂದು., ದೇಶಸೇವೆ ಹಾಗೂ ಜನರ ರಕ್ಷಣೆ ಮಾಡಲು ಸೇನೆಯಲ್ಲಿ ವಿಪುಲ ಅವಕಾಶಗಳಿವೆ. ಇಂದಿನ ಯುವಜನರು ಸೈನ್ಯ ಸೇರುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಪಘಾತ ಸಂಭವಿಸಿದಾಗ ತಕ್ಷಣದ ಸಹಾಯ ಮಾಡದೆ, ಹೆಚ್ಚಿನ ಜನರು ಪರಿಸ್ಥಿತಿಯ ತೀವ್ರತೆಯನ್ನು ನೋಡುಗರಾಗಿಯೇ ಉಳಿದುಬಿಡುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ನೀಡುವ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತುರ್ತು ಸಂದರ್ಭಗಳಲ್ಲಿ ನೆರವಾಗಬೇಕೆಂದು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಉಪಾಧ್ಯ, ಹೆಡ್ ಕಾನ್ಸೇಟಬಲ್ ಬಾಳಪ್ಪ ಎಂ. ಜಿ, ಹೆಡ್ ಕಾನ್ಸೇಟಬಲ್ ಜಿ ಎಲ್ ಆಕಾಶ್, ಕಾನ್ಸೇಟಬಲ್ ಜವೇದ್ ಖಾಸಿ, ಕಾನ್ಸೇಟಬಲ್ ಜಿ ಡಿ ಕಣ್ಣನ್ ಕೆ. ಎಸ್, ಕಾನ್ಸೇಟಬಲ್ ಎಸ್ ಸಿ ಹೂಗಾರ್ ತರಬೇತುದಾರರಾಗಿ ಆಗಮಿಸಿದ್ದರು. ತರಬೇತಿಯಲ್ಲಿ ವಿವಿಧ ತುರ್ತು ಸಂದರ್ಭಗಳಾದ ಬೆಂಕಿ ಅವಘಡ, ರಸ್ತೆ ಅಪಘಾತ, ಜಲ ವಿಪತ್ತು, ತುರ್ತು ವೈದ್ಯಕೀಯ ಸಹಾಯದಂತಹ ನಿರ್ವಹಣೆಯನ್ನು ಪ್ರಾತ್ಯಕ್ಷಿಕೆ ಹಾಗೂ ಮಾದರಿಗಳ ಮೂಲಕ ತಿಳಿಸಲಾಯಿತು. ಆಳ್ವಾಸ್ ಎನ್ಸಿಸಿ ಘಟಕದ 210 ವಿದ್ಯಾರ್ಥಿಗಳು ಹಾಗೂ ಸೃಷ್ಟಿ ಕ್ಲಬ್ ನ 7 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಗಾರದಲ್ಲಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್, ಫ್ಲೆಯಿಂಗ್ ಆಫಿಸರ್ ಪರ್ವೇಝ್ ಶರೀಫ್ ಬಿ ಜಿ, ಸೇನಾ ವಿಭಾಗದ ಅಸೋಸಿಯೇಟ್ ಎನ್ಸಿಸಿ ಆಫೀಸರ್ ಕ್ಯಾಪ್ಟನ್ ಡಾ ರಾಜೇಶ್, ನೌಕಾ ವಿಭಾಗದ ಅಸೋಸಿಯೇಟ್ ಎನ್ಸಿಸಿ ಆಫಿಸರ್ ಸಬ್ ಲೆಫ್ಟಿನೆಂಟ್ ನಾಗರಾಜ್ ಉಪಸ್ಥಿತರಿದ್ದರು. ಕೆಡೆಟ್ ಹರ್ಷಿತಾ ಸ್ವಾಗತಿಸಿದರು, ಕೆಡೆಟ್ ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.