ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 5ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು .
ಅಧ್ಯಕ್ಷೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಗೊಂಬೆಯಾಟದಂತಹ ಅಪರೂಪದ ಜಾನಪದ ಕಲೆಯನ್ನು ಎಲ್ಲರೂ ಸೇರಿ ಉಳಿಸಬೇಕು. ಈ ಕಲೆಯನ್ನು ನಶಿಸಿ ಹೋಗಲು ಬಿಡಬಾರದು. ಸಣ್ಣ ಮಕ್ಕಳನ್ನು ತರಬೇತುಗೊಳಿಸಿ ತಂಡವನ್ನು ಕಟ್ಟಬೇಕು. ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬ ಮತ್ತು ಕೊಗ್ಗ ಕಾಮತ್ ಜನ್ಮ ಶತಮಾನೋತ್ಸವದ ಅಂಗವಾಗಿ ಹಳ್ಳಿಯೆಡೆಗೆ ಗೊಂಬೆ ನಡಿಗೆ ಗೆ ಚಾಲನೆ ನೀಡುವುದಾಗಿ ಅಭಿಪ್ರಾಯ ಪಟ್ಟರು.
ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2020ನ್ನು ಖ್ಯಾತ ಹಿಂದೂಸ್ಥಾನಿ ಗಾಯಕ ವಿದ್ವಾನ್ ಗಜಾನನ ಹೆಬ್ಬಾರ್ ಇವರಿಗೆ ಪ್ರದಾನ ಮಾಡಲಾಯಿತು. ಕೊಗ್ಗ ದೇವಣ್ಣಕಾಮತ್ ಪ್ರಶಸ್ತಿ -2021ನ್ನು ಶ್ರೀ ಗಣೇಶಂ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಖ್ಯಾತ ಅರ್ಥಧಾರಿ ಹೆಚ್. ನಾರಾಯಣ ಬಿಲ್ಲವ, ಹೆಮ್ಮಾಡಿ ಇವರಿಗೆ ನೀಡಲಾಯಿತು.
ನಿವೃತ್ತ ಉಪನ್ಯಾಸಕರಾದ ಎಮ್. ರತ್ನಾಕರ ಪೈ ವೆಂಕಟರಮಣ ಮತ್ತು ರಾಕೇಶ್ ಸುಬ್ರಾಯ ಮಲ್ಯ ಇವರ ಪರವಾಗಿ ಮಾತೃಶ್ರೀ ಶೋಭಾ ಮಲ್ಯರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ಖ್ಯಾತ ಚಿತ್ರಕಲಾವಿದ ಹಾಗೂ ಹೈಸ್ಕೂಲು ಚಿತ್ರಕಲಾ ಶಿಕ್ಷಕರಾದ ರಾಜಶೇಖರ್ ತಾಳಿಕೋಟೆಯವರು ಭಾಸ್ಕರ್ ಕೊಗ್ಗ ಕಾಮತ್‌ರವರ ಯಕ್ಷಗಾನ ವೇಷದ ಚಿತ್ರವನ್ನು ಬಿಡಿಸಿ ಅಕಾಡೆಮಿಗೆ ತಂದು ಹಸ್ತಾಂತರಿಸಿ ಮೆಚ್ಚುಗೆ ಪಡೆದರು.
ಸನ್ಮಾನ ಪತ್ರವನ್ನು ಉದಯ ಭಂಡಾರ್‌ಕಾರ್ ಮತ್ತು ರಾಜೇಂದ್ರ ಪೈ ಯವರು ವಾಚಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಯಕ್ಷಗಾನ ಮೇಳದ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್,ಡಾ. ಕಾಶೀನಾಥ್ ಪೈ ಗಂಗೊಳ್ಳಿ ,ಕುಂದಪ್ರಭಾ ಪತ್ರಿಕೆಯ ಸಂಪಾದಕರಾದ
ಯು.ಎಸ್.ಶೆಣೈ, ಬಿ.ಎಸ್.ಎನ್.ಎಲ್.ನ ನಿವೃತ್ತ ಎ.ಜಿ.ಎಂ ಉಮೇಶ್ ಶಿರೂರು ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅನನ್ಯ ಮತ್ತು ಕುಮಾರಿ ಮಹಾಲಸಾರವರು ಭರತನಾಟ್ಯ ಕಾರ್ಯಕ್ರಮ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶ್ಯಾನುಭಾಗ್ ಮತು ಉದಯ ಭಂಡಾರ್‌ಕಾರ್‌ರವರು ಕಾರ್ಯಕ್ರಮ ನಿರೂಪಿಸಿದರು.