ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವ ಉಳಿಸಲು ಬೇಕಾಗುವ ರಕ್ತ, ಅದರ ಅಗತ್ಯವಿದ್ದಾಗ ಲಭ್ಯವಾಗಬೇಕಾದರೆ ಅರ್ಹರು ರಕ್ತದಾನ ಮಾಡಬೇಕು ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯದ ಬೆಂಗಳೂರು ವಿಭಾಗದ ಸಹಾಯಕ ಮಹಾ ಪ್ರಬಂಧಕ ಮಹಾಲಿಂಗ ದೇವಾಡಿಗ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕುಂದಾಪುರ ರಕ್ತನಿಧಿ ಕೇಂದ್ರ, ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ ಮತ್ತು ವಿವಿಧ ದೇವಾಡಿಗ ಸಂಘಟನೆಗಳು, ಕುಂದಾಪುರಸಿಟಿ ಲಯನ್ಸ್ ಕ್ಲಬ್, ಹೊಸಾಡು ಮುಳ್ಳಿಕಟ್ಟೆ ಸಾಯಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ತಲ್ಲೂರು ರೋಟರಿ ಸಮುದಾಯ ದಳ ಹಾಗೂ ಉಪ್ಪಿನಕುದ್ರು ಯಕ್ಷೇಶ್ವರಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ತಲ್ಲೂರಿನಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಸಿ ಅವರು ಮಾತನಾಡಿದರು.
28ನೇ ಬಾರಿ ರಕ್ತದಾನ ಮಾಡಿದ ಹಾಗೂ ಲಾಕ್‌ಡೌನ್ ಸಮಯದಲ್ಲಿ ಭಿಕ್ಷುಕರಿಗೆ ಅನ್ನದಾನ ಮಾಡಿದ ಸಮಾಜ ಸೇವಕ ರಾಜೇಶ ದೇವಾಡಿಗ ಕುಂದಾಪುರ ಇವರನ್ನು ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವತಿಯಿಂದ ಸನ್ಮಾನಿಸಲಾಯಿತು.
ವಾಸುದೇವ ಬೈಂದೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಗಣೇಶ ದೇವಾಡಿಗ ಕಿರಿಮಂಜೇಶ್ವರ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕುಂದಾಪುರ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ, ಕುಂದಾಪುರ ಸಿಟಿ ಲಯನ್ಸ್ ಅಧ್ಯಕ್ಷ ಪ್ರಕಾಶ, ತಲ್ಲೂರು ರೋಟರಿ ಅಧ್ಯಕ್ಷ ಪ್ರೇಮಾನಂದ ಕೆ, ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ, ನಿರ್ದೇಶಕ ಬಸವ ದೇವಾಡಿಗ, ಗಂಗೊಳ್ಳಿ ದೇವಾಡಿಗ ಸಂಘದ ಅಧ್ಯಕ್ಷ ಶಂಕರ ದೇವಾಡಿಗ, ಭಾಸ್ಕರ ಪೂಜಾರಿ, ಕಾಳಿಕಾಂಬಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಆಚಾರಿ, ಶ್ರೀಸಾಯಿ ಆರ್ಥಿಕ ಮಹಿಳಾ ಸಹಕಾರಿ ಸಂಘದ ಮ್ಯಾನೇಜಿಂಗ್ ಡೈರೆಕ್ಟರ್ ಭಾಸ್ಕರ ಬಿಲ್ಲವ, ಯಕ್ಷೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ಗಿರೀಶ್ ಮೊಗವೀರ, ಸಪ್ತಸ್ವರದ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ ಇದ್ದರು.