ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಸಂಕ್ರಾಂತಿಯ ನೇತೃತ್ವದಲ್ಲಿ ಮಾರಣಕಟ್ಟೆಯಲ್ಲಿ ಜಾತ್ರೆ ಪ್ರಯುಕ್ತ ನಡೆದ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಅವಿಭಜಿತ ದ.ಕ ಜಿಲ್ಲೆಯ ಯಕ್ಷಗಾನ ಸ್ಪೂರ್ತಿ ಪಟ್ಲ ಸತೀಶ ಶೆಟ್ಟರು. ಅವರ ಧ್ವನಿಯಲ್ಲಿರುವ ವಿಶೇಷತೆಯ ಸಳೆತದಿಂದ ಪಟ್ಲರ ಅಭಿಮಾನಿಗಳು ಒಂದುಗೂಡುತ್ತಾರೆ ಎಂದು ಹೇಳಿದರು.
ಉದ್ಯಮಿ ಗುರ್ಮಿ ಸುರೇಶ ಮಾತನಾಡಿ, ಪಟ್ಲ ಸತೀಶ ಶೆಟ್ಟರು ನಾಡಿನ ಹೆಮ್ಮೆಯ ಯಕ್ಷಗಾಯಕ. ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಶ್ರೀಮಂತ ಎನ್ನುವುದನ್ನು ತನ್ನ ಗಾಯನದ ಮೂಲಕ ತೋರಿಸಿಕೊಟ್ಟವರು ಎಂದರು.
ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ಯಕ್ಷಗಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇನ್ನೂ500 ವರ್ಷವಾದರೂ ಯಕ್ಷಗಾನಕ್ಕೆ ಯಾವುದೇ ಕುಂದು ಬರದು. ಯಕ್ಷಗಾನದ ಶಕ್ತಿ ಅಂತಹದ್ದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ ಶೆಟ್ಟಿ, ಅಭಿಮಾನಿಗಳ ಪ್ರೀತಿಯ ಮಧ್ಯೆ ಮಾತು ಮೌನವಾಗುತ್ತದೆ. ಕಲಾವಿದರಿಗೆ ಇಂತಹ ಅಭಿಮಾನವೇ ಸಂಪತ್ತು. ನಿಮ್ಮ ಅಭಿಮಾನ ಎಲ್ಲ ಯಕ್ಷಗಾನ ಕಲಾವಿದರ ಮೇಲಿರಲಿ, ಯಕ್ಷಗಾನವನ್ನು ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ಚಿತ್ರಕೂಟ ಕಳಿ ಆಲೂರು ಇದರ ವೈದ್ಯರಾದ ಡಾ.ರಾಜೇಶ ಬಾಯರಿ, ಮಾರಣಕಟ್ಟೆ ರಾಮಚಂದ್ರ ಮಂಜರು, ಪಾವಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಚಾರ್ಟೆಡ್ ಅಕೌಟೆಂಟ್ ರಾಜೇಶ ಶೆಟ್ಟಿ ನಂದ್ರೋಳಿ, ಪತ್ರಕರ್ತ ವಸಂತ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡ ವತಿಯಿಂದ ಪಟ್ಲ ಸತೀಶ ಶೆಟ್ಟರನ್ನು ಸನ್ಮಾನಿಸಲಾಯಿತು. ಯಕ್ಷಸಂಕ್ರಾಂತಿಯ ರೂವಾರಿ ನಾಗರಾಜ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ವಂದಿಸಿದರು. ಬಳಿಕ ಗಜೇಂದ್ರ ಮೋಕ್ಷ, ಮಾನಿಷಾದ, ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.