ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮರವಂತೆಯ ಪ್ರವೀಣ ಖಾರ್ವಿ ಅವರ ಲಕ್ಷ್ಮೀ ಎಂಟರ್‌ಪ್ರೈಸಸ್ ಅಧೀನ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಿರುವ ಸೇವಾ ಸಿಂಧು ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎಂ. ಶಂಕರ ಖಾರ್ವಿ, ಸರ್ಕಾರ ಮತ್ತು ಸರ್ಕಾರೇತರ ವ್ಯವಸ್ಥೆಗಳ ನೂರಾರು ಸೇವೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪಡೆಯುವ ಅನಿವಾರ್ಯತೆ ಇದೆ. ಗ್ರಾಮೀಣ ಪ್ರದೇಶವಾಗಿರುವ ಮರವಂತೆಯಲ್ಲಿ ವಿಶೇಷ ಚೇತನರಾದ ಪ್ರವೀಣ ಖಾರ್ವಿ ಅಂತಹ ಸೇವೆಗಳನ್ನು ನೀಡುವ ಕೇಂದ್ರವನ್ನು ಆರಂಭಿಸುತ್ತಿರುವುದು ಸ್ತುತ್ಯರ್ಹ. ಇದು ಪ್ರದೇಶದ ಅಗತ್ಯವನ್ನು ಈಡೇರಿಸಲಿದೆ ಎಂದು ಹೇಳಿದರು.
ಸ್ವಾಗತಿಸಿದ ಪ್ರವೀಣ ಖಾರ್ವಿ, ತಮ್ಮ ಕೇಂದ್ರದಲ್ಲಿ ಪಾಸ್‌ಪೋರ್ಟ್, ರೇಷನ್ ಕಾರ್ಡ್, ಜಾತಿ ದೃಢೀಕರಣ, ಗುರುತು ಚೀಟಿ ಸೇರಿ ಹಿರಿಯ ನಾಗರಿಕರ ಸಾಮಾನ್ಯ ಸೇಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇನ್ನೂರಕ್ಕಿಂತ ಅಧಿಕ ಸೇವೆಗಳು ಕನಿಷ್ಠ ಶುಲ್ಕದಲ್ಲಿ ಸಾರ್ವಜನಿಕರಿಗೆ ಸಿಗಲಿದೆ ಎಂದರು.
ಕಟ್ಟಡದ ಮಾಲೀಕ ಚಂದ್ರ ಖಾರ್ವಿ ವಂದಿಸಿದರು. ಸಿಎಸ್‌ಸಿ ಬೈಂದೂರು ವ್ಯವಸ್ಥಾಪಕ ಗೋವರ್ಧನ ಎಚ್, ಜಿಲ್ಲಾ ವ್ಯವಸ್ಥಾಪಕ ನಿತೇಶ್ ಶೆಟ್ಟಿಗಾರ್, ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ, ಉದ್ಯಮಿ ಸತೀಶ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಇದ್ದರು.