ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಅವರು ಕಾರವಾರದ ಎಸಿಬಿಯಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿದ್ದು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದರು.
ಮೂಲತಃ ಕಾರ್ಕಳದವರಾದ ಶ್ರೀಕಾಂತ್ ಅವರು, ಪೊಲೀಸ್ ಸೇವೆಗೆ ಬರುವ ಮೊದಲು ಹಾಸನದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು ಮೊದಲಿಗೆ ಮೈಸೂರಿನ ಕೆ.ಆರ್ ನಗರದಲ್ಲಿ ಪ್ರೊಬೆಷನರಿಯಾಗಿದ್ದು ಬಳಿಕ ಸೋಮವಾರಪೇಟೆ, ಹೊಳೆನರಸಿಪುರದಲ್ಲಿ ಪಿಎಸ್ಐ ಆಗಿ ಅಲ್ಲಿಂದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿ ಮಂಗಳೂರಿನ ಮೆಸ್ಕಾಂ ವಿಜಿಲೆನ್ಸ್, ಸಕಲೇಶಪುರ,ಪುತ್ತೂರು, ಕಾರವಾರದ ಕುಮಟಾ, ಉಡುಪಿ ನಗರ ಹಾಗೂ ಬ್ರಹ್ಮಾವರದಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು ಅಲ್ಲಿಂದ ಡಿವೈಎಸ್ಪಿ ಆಗಿ ಪದೋನ್ನತಿ ಹೊಂದಿ ಕಾರವಾರ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅಪರಾಧ ವಿಭಾಗದಲ್ಲಿ ಉತ್ತಮ ಪರಿಣಿತಿ ಹೊಂದಿರುವ ಶ್ರೀಕಾಂತ್ ಅವರಿಗೆ ಬ್ಯಾಂಕೊಂದರ ಡಕಾಯಿತಿ ಪ್ರಕರಣ ಪತ್ತೆಹಚ್ಚಿದ್ದ ಹಿನ್ನೆಲೆ 2012ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಅಲ್ಲದೆ ಕರಾವಳಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೂ ಕೂಡ ಉಡುಪಿ ಜಿಲ್ಲೆಯ ಹಲವೆಡೆ ನಡೆದ ಅತೀ ಕ್ಷಿಷ್ಟಕರ ಪ್ರಕರಣ ಪತ್ತೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಕೆ. ಶ್ರೀಕಾಂತ್, ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಕ್ರಮಕೈಗೊಳ್ಳಲಾಗುತ್ತದೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಸುಧಾರಿತ ಬೀಟ್ ಪದ್ಧತಿ ಈಗಾಗಾಲೇ ಜಾರಿಯಲ್ಲಿದೆ. ಸಾರ್ವಜನಿಕರ ಸಹಕಾರದೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲಾಗುವುದು ಎಂದಿದ್ದಾರೆ.