ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನೇತೃತ್ವದಲ್ಲಿ ಸುಗ್ಗಿ – ಹುಗ್ಗಿ ಜಾನಪದ ಉತ್ಸವ – 2021 ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಫೆ.13ರ ಸಂಜೆ 5.30ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರಲಿದ್ದು, ಕಾರ್ಯಕ್ರದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ನೇರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯಸಭೆ ಸಂಸದರಾದ ಓಸ್ಕರ್ ಫೆರ್ನಾಂಡಿಸ್, ಶಿವಮೊಗ್ಗ ಲೋಕಸಭಾ ಸಂಸದರಾದ ಬಿ. ವೈ. ರಾಘವೆಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಆಯನೂರು ಮಂಜುನಾಥ್, ಎಲ್. ಎಸ್. ಭೋಜೇಗೌಡ, ಡಾ. ತೇಜಸ್ವಿನಿ ಗೌಡ, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ ಹಾಗೂ ಬೈಂದೂರು ತಾಲೂಕು ತಹಶೀಲ್ದಾರರಾದ ಕಿರಣ ಜಿ. ಗೌರಯ್ಯ ಉಪಸ್ಥಿತರಿರಲಿದ್ದಾರೆ.
ಸಂಜೆ 5 ಗಂಟೆಗೆ ಬೈಂದೂರು ಪ್ರವಾಸಿ ಮಂದಿರದಿಂದ ಶ್ರೀ ಸೇನೇಶ್ವರ ದೇವಸ್ಥಾನದವರೆಗೆ ಕಲಾತಂಡಗಳ ಮೆರವಣಿಗೆ ನಡೆಯಲಿದ್ದು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರದಲ್ಲಿ ಬೈಂದೂರು ಲಾವಣ್ಯ ಕಲಾತಂಡದಿಂದ ರಂಗಗೀತೆ, ರಾಮನಗರ ರಮೇಶ್ ಅಂಕನಹಳ್ಳಿ ಮತ್ತು ತಂಡದಿಂದ ಪೂಜಾ ಕುಣಿತ, ಬೈಂದೂರು ಸುರಭಿ ಕಲಾತಂಡದಿಂದ ಚಂಡೆ ವಾದ್ಯ, ಶಿವಮೊಗ್ಗ ಸಂತೋಷ ಮತ್ತು ತಂಡದಿಂದ ಡೊಳ್ಳು ಕುಣಿತ, ಉಡುಪಿ ಗುರುಚರಣ ಪೊಲಿಪು ಮತ್ತು ತಂಡದಿಂದ ಕಂಗೀಲು ನೃತ್ಯ, ದಾವಣಗೆರೆ ನಾಗರಾಜ ಮತ್ತು ತಂಡದಿಂದ ಪುರವಂತಿಕೆ, ಬೈಂದೂರು ಡಿ. ಮೂರ್ತಿ ಮತ್ತು ವೃಂದದಿಂದ ಜಾನಪದ ಗೀತೆಗಳು, ಶಿವಮೊಗ್ಗ ಶೃತಿ ಮತ್ತು ತಂಡದಿಂದ ಲಂಬಾಣಿ ನೃತ್ಯ, ಬೈಂದೂರು ನಿಶ್ಚಿತಾ ಮತ್ತು ತಂಡದಿಂದ ಸಮೂಹ ನೃತ್ಯ, ಉಡುಪಿ ಶಂಕರದಾಸ ಚಂಡ್ಕಳ ಮತ್ತು ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ, ಉಡುಪಿ ಸರಸ್ವತಿ ಯುವಕ ಮಂಡಲ ಕಲಾತಂಡದಿಂದ ಕರಗ ಕೋಲಾಟ, ತುಮಕೂರು ಲೋಕೇಶ್ ಮತ್ತು ತಂಡದಿಂದ ಚಿಟ್ ಮೇಳ, ಮೇಲ್‌ಗಂಗೊಳ್ಳಿ ಡಾ. ಬಿ. ಆರ್. ಯುವಕ ಸಂಘದಿಂದ ಕಂಸಾಳೆ ನೃತ್ಯ, ಮೈಸೂರು ಕುಮಾರ ಮತ್ತು ತಂಡದಿಂದ ನಗಾರಿ ವಾದ್ಯ, ಯಳಜಿತ ರಾಮು ಮರಾಠಿ ಮತ್ತು ತಂಡದಿಂದ ಹೋಳಿ ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಬೇಕ್ಕೆರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.