ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿಶ್ವಸಾಗರ ಕ್ರಿಕೆಟರ್ಸ್ಸ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಕಟ್ಟಡ ನಿರ್ಮಾಣ ಸಹಾಯಾರ್ಥ ಜರಗಿದ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡ ಪ್ರಥಮ ಸ್ಥಾನಿಯಾಗಿ ‘ಅಯೋಧ್ಯೆ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ.
ಗಂಗೊಳ್ಳಿಯ ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡವು ಫ್ರೆಂಡ್ಸ್ ಬೆಣ್ಗೆರೆ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫ್ರೆಂಡ್ಸ್ ಬೆಣ್ಗೆರೆ ತಂಡದ ಪ್ರಜ್ವಲ್ ಮೇಸ್ತ ಬೆಸ್ಟ್ ಆಲ್‌ರೌಂಡರ್ ಮತ್ತು ಪಾಂಡುರಂಗ ಉತ್ತಮ ಗೂಟರಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡರೆ, ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡದ ಗುರು ಉತ್ತಮ ದಾಂಡಿಗ ಹಾಗೂ ವಿವೇಕ ಕಲೈಕಾರ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ದುಬೈ ಕದಂ ಗೌರವಾಧ್ಯಕ್ಷ ಶೀನ ದೇವಾಡಿಗ ಮತ್ತು ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಗಂಗೊಳ್ಳಿ ಗ್ರಾಪಂ ಉಪಾದ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗುಜ್ಜಾಡಿ ಗ್ರಾಪಂ ಮಾಜಿ ಅದ್ಯಕ್ಷ ಹರೀಶ ಮೇಸ್ತ, ಪತ್ರಕರ್ತ ಬಿ.ರಾಘವೇಂದ್ರ, ಗಂಗೊಳ್ಳಿ ದೇವಾಡಿಗ ಸಂಘದ ಅಧ್ಯಕ್ಷ ಶಂಕರ ದೇವಾಡಿಗ, ವಿಶ್ವಸಾಗರ ಸಂಸ್ಥೆಯ ಅಧ್ಯಕ್ಷ ಸತೀಶ ದೇವಾಡಿಗ ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಉಳಿದ ೭೨೫೦ ರೂ.ಗಳನ್ನು ಅಯೋಧ್ಯೆ ಶ್ರೀ ರಾಮ ಮಂದಿರ ಕಟ್ಟಡ ನಿರ್ಮಾಣಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಲಾಯಿತು. ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.