ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆರಾಡಿ ಗ್ರಾ.ಪಂ.ನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಮಾಬಲ ಕಂಡುಕೊಂಡ ಹಿನ್ನೆಲೆಯಲ್ಲಿ ಅದೃಷ್ಟದಾಟದಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಗಿರಿಜಾ ಶೆಟ್ಟಿ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುದರ್ಶನ್ ಬಿ. ಆರ್. ಆಯ್ಕೆಗೊಂಡಿದ್ದಾರೆ.
14 ಸದಸ್ಯ ಬಲದ ಕೆರಾಡಿ ಗ್ರಾ.ಪಂ.ನಲ್ಲಿ 8 ಬಿಜೆಪಿ ಬೆಂಬಲಿತ ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆದ್ದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಿರಿಜಾ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತರಾಗಿ ಜ್ಯೋತಿ ವಿ. ಶೆಟ್ಟಿ ಸ್ಪಧಿಸಿದ್ದರು. ಮತದಾನ ನಡೆದಾಗ ಇಬ್ಬರಿಗೂ ತಲಾ7 ಮತ ಪಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಚೀಟಿ ಎತ್ತುವ ಮೂಲಕ ಆಯ್ಕೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಗಿರಿಜಾ ಶೆಟ್ಟಿ ಅವರಿಗೆ ಅದೃಷ್ಟ ಒಲಿದಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬಿ.ಆರ್. ಸುದರ್ಶನ್ ಶೆಟ್ಟಿ ಅವರು 8 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಮಂಜು ಕೊಠಾರಿ ಅವರು 6 ಮತ ಪಡೆದರು.
ಕುಂದಾಪುರ ತಾ.ಪಂ. ಕಾರ‍್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.