ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ, ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ ಬಸ್‌ಗಳಲ್ಲಿ, ಮಕ್ಕಳಿಗೆ ಸ್ಪಷ್ಟವಾಗಿ ಕಾಣುವಂತೆ ಚೈಡ್‌ಲೈನ್ ಸಂಖ್ಯೆ 1098 ಸಂಖ್ಯೆಯ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಕುರಿತಂತೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಬಸ್‌ಗಳಲ್ಲಿ ಚೈಡ್‌ಲೈನ್ ಸಂಖ್ಯೆ 1098 ಅಳವಡಿಸುವುದರ ಜೊತೆಗೆ ಮಕ್ಕಳಿಗೆ ಆ ಸಂಖ್ಯೆಯ ಪ್ರಯೋಜನ ಕುರಿತು ಮಾಹಿತಿ ನೀಡಬೇಕು ಹಾಗೂ ಶಾಲಾ ವಾಹನಗಳಲ್ಲಿ ಮಕ್ಕಳು ದೂರು ನೀಡಲು ದೂರು ಪೆಟ್ಟಿಗೆ ಅಳವಡಿಸಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಸಭೆಗಳನ್ನು ತ್ರೈಮಾಸಿಕವಾಗಿ ನಡೆಸಿ, ಸಭೆಯಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ತೆಗೆದುಕೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಆಯುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಸಬೇಕು. ಬಂದರಿನ ಗೇಟಿನಲ್ಲಿ ಮಕ್ಕಳು ಒಳ ಪ್ರವೇಶಿಸದಂತೆ ತಡೆಯಲು ಬಂದರು ಇಲಾಖೆಗೆ ಖಡಕ್ ಎಚ್ಚರಿಕೆ ನೀಡಿದರು.
ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಮತ್ತು ಆಪ್ತ ಸಮಾಲೋಚಕರನ್ನು ಗುರುತಿಸಬೇಕು. ಮಕ್ಕಳ ರಕ್ಷಣಾ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವಂತೆ ಡಿಸಿ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಜನವರಿವರೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ 31 ಗಂಡು ಮತ್ತು 53 ಹೆಣ್ಣು ಮಕ್ಕಳ ಪ್ರಕರಣಗಳು ಬಂದಿದ್ದು, ಹಿಂದಿನ ಬಾಕಿ ಪ್ರಕರಣಗಳೂ ಸೇರಿದಂತೆ ಒಟ್ಟು 31 ಗಂಡು ಹಾಗೂ 57 ಹೆಣ್ಣು ಮಕ್ಕಳ ಪ್ರಕರಣ ಇತ್ಯರ್ಥಗೊಳಿಸಿದ್ದು, 5 ಹೆಣ್ಣು ಮಕ್ಕಳ ಪ್ರಕರಣ ಬಾಕಿ ಇದೆ. ಪುರ್ನವಸತಿ ಒದಗಿಸುವ ಕುರಿತ 93 ಪ್ರಕರಣಗಳಲ್ಲಿ 23 ಮಕ್ಕಳ ಪಾಲನಾ ಸಂಸ್ಥೆಗಳಿಗೆ ವರ್ಗಾಯಿಸಿದ್ದು, 62 ನ್ನು ಹೆತ್ತವರ/ಪೋಷಕರ ವಶಕ್ಕೆ ಬಿಡುಗಡೆ ಮಾಡಿದೆ, 7 ನ್ನು ದತ್ತು ಕೇಂದ್ರಗಳಿಗೆ ಮತ್ತು 1 ನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್. ಶೇಷಪ್ಪ, ಕಾರ್ಮಿಕ ಅಧಿಕಾರಿ ಕುಮಾರ್, ಕೋಟ ಠಾಣಾ ಸಹಾಯಕ ಉಪ ನಿರೀಕ್ಷಕಿ ಮುಕ್ತಾ, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.